ಮಂಗಳೂರು(ತಿರುಪತಿ): ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಕೈಗೊಳ್ಳುತ್ತಿರುವ ಮಹತ್ವಕಾಂಕ್ಷೆಯ ಸೂರ್ಯಯಾನ ಯೋಜನೆಗೆ ಕ್ಷಣಗಣನೆ ಆರಂಭವಾಗಿದೆ. ಇಸ್ರೊ ಮುಖ್ಯಸ್ಥ ಎಸ್. ಸೋಮನಾಥ್ ಅವರು ತಿರುಪತಿ ಜಿಲ್ಲೆಯ ಪ್ರಸಿದ್ಧ ಸುಲ್ಲುರಪೇಟೆಯ ಚೆಂಗಾಲಮ್ಮ ದೇವಾಲಯಕ್ಕೆ ತೆರಳಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.
ಸೆ.2 ಶನಿವಾರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಆದಿತ್ಯ ಎಲ್–1 ಉಪಗ್ರಹ ಹೊತ್ತ ಪಿಎಸ್ಎಲ್ವಿ-ಸಿ 57 ರಾಕೆಟ್ ನಭಕ್ಕೆ ಚಿಮ್ಮಲಿದೆ ಎಂದು ಸೋಮನಾಥ್ ಮಾಧ್ಯಮಗಳಿಗೆ ತಿಳಿಸಿದರು. ಎಲ್–1 ಉಪಗ್ರಹ ಸೂರ್ಯನ ಪ್ರಭಾವಲಯವನ್ನು ಸೇರಲು 125 ದಿನ ಬೇಕಾಗುತ್ತದೆ ಎಂದು ತಿಳಿಸಿದರು. ಚಂದ್ರಯಾನ–3ಕ್ಕೂ ಮುನ್ನ ಎಸ್ ಸೋಮನಾಥ್ ಅವರು ಇದೇ ಚಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.