ಸೆಪ್ಟೆಂಬರ್ 5‍ರಂದು ರಾಷ್ಟ್ರಪತಿಯಿಂದ ‘ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ ಪ್ರದಾನ – ಕರ್ನಾಟಕದ 6 ಮಂದಿಗೆ ಪ್ರಶಸ್ತಿ

ಮಂಗಳೂರು (ಹೊಸದಿಲ್ಲಿ): ಸೆ.5ರಂದು ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2023’ ವಿಜೇತ ಶಿಕ್ಷಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹೊಸ ದಿಲ್ಲಿಯ ವಿಜ್ಞಾನ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಶಿಕ್ಷಣ ಸಚಿವಾಲಯವು ಜಂಟಿಯಾಗಿ ಆಯೋಜಿಸಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಶಿಕ್ಷಣ ಸಚಿವಾಲಯವು ಮಾಹಿತಿ ನೀಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ಕರ್ನಾಟಕದ 6 ಮಂದಿ ಸೇರಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವಿಭಾಗದಿಂದ ಶಿರಸಿಯ ಶ್ರೀ ಮಾರಿಕಾಂಬ ಸರಕಾರಿ ಹೈಸ್ಕೂಲ್‌ನ ಶಿಕ್ಷಕ ನಾರಾಯಣ ಪರಮೇಶ್ವರ ಭಾಗವತ್‌, ಬಾಗಲಕೋಟೆಯ ಕೆಎಲ್‌ಇ ಸೊಸೈಟಿಯ ಜೂನಿಯರ್‌ ಕಾಲೇಜಿನ ಹೈಸ್ಕೂಲ್‌ ಶಿಕ್ಷಕಿ ಸಪ್ನಾ ಶ್ರೀ ಸೈಲ್‌ ಅನಿಗೋಲ್‌, ಉನ್ನತ ಶಿಕ್ಷಣ ವಿಭಾಗದಿಂದ ಧಾರವಾಡ ಐಐಟಿಯ ಡಾ. ಎಸ್‌ ಆರ್‌ ಮಹದೇವ ಪ್ರಸನ್ನ, ಬೆಂಗಳೂರಿನ ಇಂಟರ್‌ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಡಾ.ದಿನೇಶ್‌ ಬಾಬು ಜೆ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್‌ ಸ್ಕಿಲ್‌ ಟ್ರೈನಿಂಗ್‌ ಇನ್ಸ್ಟಿಟ್ಯೂಟ್‌ನ ಪೂಜಾ ಆರ್‌ ಸಿಂಗ್‌, ನ್ಯಾಷನಲ್‌ ಸ್ಕಿಲ್‌ ಟ್ರೈನಿಂಗ್‌ ಫಾರ್‌ ವುಮೆನ್‌ ನ ದಿವ್ಯಾ ಆಯ್ಕೆಯಾದವರು.

ಈ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಗೆ ದೇಶಾದ್ಯಂತ ಒಟ್ಟು 75 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ವಿಶಿಷ್ಟ ಕೊಡುಗೆ, ಬದ್ಧತೆ, ಅರ್ಪಣಾ ಮನೋಭಾವದಿಂದ ಶಿಕ್ಷಣದ ಗುಣಮಟ್ಟವನ್ನು ಮಾತ್ರವಲ್ಲದೆ, ವಿದ್ಯಾರ್ಥಿಗಳ ಜೀವನವನ್ನೂ ಸಂಪದ್ಭರಿತಗೊಳಿಸಿದ ಶಿಕ್ಷಕರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಪ್ರತಿ ಪ್ರಶಸ್ತಿಯು ಅರ್ಹತಾ ಪ್ರಮಾಣ ಪತ್ರ, ರೂ. 50,000 ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ.

LEAVE A REPLY

Please enter your comment!
Please enter your name here