ಇಂದು ಬರಪೀಡಿತ ತಾಲೂಕುಗಳ ಮೊದಲ ಪಟ್ಟಿ ಘೋಷಣೆ

ಮಂಗಳೂರು (ಬೆಂಗಳೂರು): ‘ಬರ ಘೋಷಣೆ ಸಂಬಂಧ ಇಂದು(ಸೆ.04) ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು, ಬರಪೀಡಿತ ತಾಲೂಕುಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಬರ ಘೋಷಣೆ ಸಂಬಂಧ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಮಾನದಂಡ ನಿಗದಿ ಮಾಡಿದೆ. ಅದರ ಅನ್ವಯವೇ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

ರಾಜ್ಯದ 113 ತಾಲೂಕುಗಳನ್ನು ಆಗಸ್ಟ್‌ 18ರಂದು ತಾತ್ಕಾಲಿಕ ಬರಪೀಡಿತ ಎಂದು ಪಟ್ಟಿ ಮಾಡಿಕೊಂಡಿದ್ದೇವೆ. ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆ ಕೈಗೊಂಡು ವರದಿ ತರಿಸಿಕೊಳ್ಳುತ್ತಿದ್ದೇವೆ. ಕನಿಷ್ಠ ಮೂರು ವಾರ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದ ಮಳೆ ಕೊರತೆ ಇರಬೇಕು. ಯಾವ ತಾಲೂಕು ಅರ್ಹವಾಗುತ್ತವೆ ಎಂಬುದನ್ನು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು. ಅವಶ್ಯವಿದ್ದರೆ ಸಚಿವ ಸಂಪುಟದ ಗಮನಕ್ಕೂ ತಂದು ಘೋಷಣೆ ಮಾಡಲಾಗುವುದು’ ಎಂದು ಸಚಿವರು ಹೇಳಿದ್ದಾರೆ.

‘ಆಗಸ್ಟ್‌ 31ಕ್ಕೆ ಸುಮಾರು 75 ತಾಲೂಕುಗಳ ಪಟ್ಟಿ ಸಿದ್ಧ ಮಾಡಿದ್ದೇವೆ. ಆಯಾಯ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ವಾರ ಅಥವಾ ಹತ್ತು ದಿನಗಳಲ್ಲಿ ಬರಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿ ಘೋಷಣೆ ಮಾಡಲಾಗುವುದು’, ಮಳೆ ಪರಿಸ್ಥಿತಿ ಆಧಾರದ ಮೇಲೆ ಮೂರನೇ ಪಟ್ಟಿ ಸಿದ್ಧಪಡಿಸಲೂ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಪಟ್ಟಿಯಲ್ಲಿ ಬಿಟ್ಟು ಹೋದ ತಾಲೂಕುಗಳನ್ನು ಎರಡನೇ ಪಟ್ಟಿಯಲ್ಲಿ ಪರಿಗಣಿಸುತ್ತೇವೆ, ಎರಡನೇ ಪಟ್ಟಿ ಬಿಟ್ಟು ಹೋದ ತಾಲೂಕುಗಳನ್ನು ಮೂರನೇ ಪಟ್ಟಿಯಲ್ಲಿ ಪರಿಗಣಿಸಲು ಪ್ರಯತ್ನಿಸುತ್ತೇವೆ’ ಎಂದು ಸಚಿವರು ಹೇಳಿದ್ದಾರೆ.

‘ಬರಪೀಡಿತ ತಾಲೂಕು ಘೋಷಣೆ ಆಗುತ್ತಿದ್ದಂತೆ ತುರ್ತು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುವುದು. ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲು, ಖಾಸಗಿ ಬಾಡಿಗೆ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲು ಅನುದಾನ ನೀಡಲಾಗುವುದು. ಬೆಳೆ ಹಾನಿ ಪರಿಹಾರ ಕೊಡಿಸಲು ಚಾಲನೆ ನೀಡಲಿದ್ದೇವೆ. ಎನ್‌ಡಿಆರ್‌ಎಫ್‌ ಮಾನದಂಡ ಪ್ರಕಾರ ರಾಜ್ಯಕ್ಕೆ ದೊರೆಯಬೇಕಾದ ಪರಿಹಾರ ಪಡೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಸಚಿವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here