ಮಂಗಳೂರು: ಝೋಮ್ಯಾಟೋ, ಸ್ವಿಗ್ಗಿ ಸೇರಿದಂತೆ ಎಲ್ಲಾ ಗಿಗ್ ಕಾರ್ಮಿಕರಿಗೆ 2 ಲಕ್ಷ ರೂಪಾಯಿ ಅಪಘಾತ ವಿಮೆ, 2 ಲಕ್ಷ ರೂಪಾಯಿ ಜೀವವಿಮೆ ಸೇರಿದಂತೆ ಒಟ್ಟು 4 ಲಕ್ಷ ರೂಪಾಯಿ ವಿಮೆ ಘೋಷಣೆ ಮಾಡಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಝೋಮ್ಯಾಟೋ, ಸ್ವಿಗ್ಗಿ ಯಂತಹ ಎಲ್ಲಾ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ 4 ಲಕ್ಷಗಳ ಅಪಘಾತ ಮತ್ತು ಜೀವವಿಮೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತನ್ನ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಗಿಗ್ ಕಾರ್ಮಿಕರು ರಾಜ್ಯ ಸರಕಾರದ ಸೇವಾಸಿಂಧು ಪೋರ್ಟಲ್ ನಲ್ಲಿ ಅಗತ್ಯ ದಾಖಲೆಯೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯಬೇಕಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 60 ವರ್ಷದ ವರೆಗಿನ ಗಿಗ್ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿದ್ದು ಆದಾಯ ತೆರಿಗೆ ಪಾವತಿದಾರರಾಗಿ ಇರಬಾರದು. ಮಾತ್ರವಲ್ಲ ಇಎಸ್ ಐ ಮತ್ತು ಇಪಿಎಫ್ ಹೊಂದಿರಬಾರದು. ಉದ್ಯೋಗದಾತರಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ, ಗುರುತಿನ ಚೀಟಿ, ಆದಾರ್ ಸಂಖ್ಯೆ, ಇಶ್ರಮ ಗುರುತಿನ ಚೀಟಿ ಸಂಖ್ಯೆ, ಭಾವಚಿತ್ರ, ವಿಳಾಸ ಪುರಾವೆಯೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ.