ಕೇರಳಕ್ಕೆ ವಕ್ಕರಿಸಿದ ‘ನಿಫಾ ವೈರಸ್’ – ಇಬ್ಬರ ಸಾವು ದೃಢಪಡಿಸಿದ ಕೇಂದ್ರ ಆರೋಗ್ಯ ಸಚಿವ

ಮಂಗಳೂರು(ದೆಹಲಿ): ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ನಿಫಾ ವೈರಸ್‌ನಿಂದ ಮೃತಪಟ್ಟಿರುವುದು ದೃಢಪಟ್ಟಿರುವುದಾಗಿ ಕೇಂದ್ರದ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ದೃಢಪಡಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಪುಣೆ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಈ ರೋಗ ಲಕ್ಷಣ ಇರುವುದು ದೃಢಪಟ್ಟಿದೆ. ಶಂಕಿತ ನಿಫಾ ತಗಲಿರುವ ಇತರ ನಾಲ್ಕು ಮಾದರಿಗಳ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಕೇಂದ್ರದಿಂದ ಕೇರಳಕ್ಕೆ ತಂಡವನ್ನು ಕಳುಹಿಸಲಾಗಿದೆ. ನಿಫಾ ಕುರಿತು ಕೇಂದ್ರದ ತಂಡ ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಆಗಸ್ಟ್ 30 ರಂದು ಮೊದಲ ಪ್ರಕರಣ ದಾಖಲಾಗಿತ್ತು. ನಿನ್ನೆ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಜ್ವರದಿಂದ ಇಬ್ಬರು ಸಾವನ್ನಪ್ಪಿದ್ದರು. ಸಾವಿನ ನಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಿಫಾ ಸೋಂಕಿನ ಲಕ್ಷಣ ಕಂಡುಬಂದಿರುವ ಒಂಭತ್ತು ವರ್ಷದ ಮಗು ಸೇರಿದಂತೆ ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಪರೀಕ್ಷೆ ಫಲಿತಾಂಶ ಬಂದ ನಂತರ ನಿನ್ನೆ ಮೃತಪಟ್ಟ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಆಗಸ್ಟ್ 30 ರಂದು ಅವರು ಜ್ವರದಿಂದ ಸಾವನ್ನಪ್ಪಿದ್ದರು. 10 ದಿನಗಳ ನಂತರ, ನಾಲ್ಕು ಸಂಬಂಧಿಕರಲ್ಲಿ ರೋಗ ಲಕ್ಷಣಗಳು ಕಂಡು ಬಂದಿದ್ದವು. ಈಗ ಮೃತಪಟ್ಟವರ ಇಬ್ಬರು ಮಕ್ಕಳು, ಅವರ ಸಂಬಂಧಿ ಮತ್ತು ಸಂಬಂಧಿಕರ ಮಗು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಶಂಕಿತರ ರಕ್ತ ಮತ್ತು ದ್ರವವನ್ನ ಪರೀಕ್ಷೆಗಾಗಿ ಪುಣೆ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದೆ.

ಸಾವುಗಳು ವರದಿಯಾದ ಬೆನ್ನಲ್ಲಿಯೇ ಕೇರಳದ ಆರೋಗ್ಯ ಇಲಾಖೆ ಸೋಮವಾರ ರಾತ್ರಿ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ ಹೆಲ್ತ್‌ ಅಲರ್ಟ್‌ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ನಿರ್ದೇಶನ ನೀಡಿದೆ. 2018 ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಹರಡಿರುವ ಬಗ್ಗೆ ವರದಿಯಾಗಿತ್ತು. ಆ ಬಳಿಕ 2021ರಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ನಿಫಾ ವೈರಸ್‌ ಪ್ರಸಾರದ ಬಗ್ಗೆ ವರದಿಯಾಗಿತ್ತು. ನಿಫಾ ವೈರಸ್‌ಗೆ ಇದುವರೆಗೆ ಯಾವುದೇ ಚುಚ್ಚುಮದ್ದಾಗಲೀ, ಔಷಧವಾಗಲಿ ಕಂಡುಹಿಡಿಯಲಾಗಿಲ್ಲ. ನಿಫಾ ವೈರಸ್ ಏಷ್ಯಾದಲ್ಲಿ ತಿಳಿದಿರುವ ಕೆಲವೇ ಸಾಂಕ್ರಾಮಿಕಗಳಿಗೆ ಕಾರಣವಾಗಿದ್ದರೂ, ಇದು ವ್ಯಾಪಕ ಶ್ರೇಣಿಯ ಪ್ರಾಣಿಗಳಿಗೆ ಸೋಂಕು ತರುತ್ತದೆ ಮತ್ತು ಜನರಲ್ಲಿ ತೀವ್ರವಾದ ಕಾಯಿಲೆ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

  • ನಿಫಾ ವೈರಸ್ ಮೆದುಳು ಜ್ವರಕ್ಕೆ ಕಾರಣವಾಗಬಹುದು – ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ ಪ್ರಾಣಾಪಾಯ ಸಂಭವಿಸಬಹುದು.
  • ನಿಫಾ ರೋಗದ ಲಕ್ಷಣ ತಲೆನೋವು, ಜ್ವರ, ಉಸಿರಾಟದ ತೊಂದರೆ.
  • ನಿಫಾ ವೈರಸ್‌ ಸೋಂಕಿನಿಂದ ಹರಡುವ ಅಂಟುರೋಗವಾಗಿದ್ದು ರೋಗ ಭಾದಿತ ಬಾವಲಿ ಮತ್ತು ಹಂದಿಯಿಂದ ಹರಡುತ್ತದೆ.
  • ನಿಫಾ ರೋಗಕ್ಕೆ ಇದುವರೆಗೆ ಯಾವುದೇ ಔಷಧ, ಚುಚ್ಚು ಮದ್ದು ಕಂಡುಹಿಡಿಯಲಾಗಿಲ್ಲ.
  • ನಿಫಾ ರೋಗ 1998ರಲ್ಲಿ ಮೊದಲ ಬಾರಿಗೆ ಮಲೇಶಿಯಾದ ಕಾಮ್ ಪುಂಗ್ ಸುಂಗಾಯಿ ನಿಫಾ ಎಂಬಲ್ಲಿ ಪತ್ತೆಯಾಗಿತ್ತು. ಇದೇ ಕಾರಣಕ್ಕೆ ಈ ರೋಗವನ್ನು ನಿಫಾ ವೈರಸ್‌ ಎಂದು ಹೇಳಲಾಗುತ್ತದೆ.
  • ಈ ಹಿಂದೆ ಕೇರಳದಲ್ಲಿ 18 ನಿಫಾ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 17 ಮಂದಿ ಮೃತ ಪಟ್ಟಿದ್ದಾರೆ.
  • ಹಕ್ಕಿ, ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನಬೇಡಿ.
  • ಯಾವುದೇ ರೋಗ ಪೀಡಿತರ ಸಂಪರ್ಕಕ್ಕೆ ಬಂದರೆ ಚೆನ್ನಾಗಿ ತಿಕ್ಕಿ ಕೈ ತೊಳೆಯಿರಿ.
  • ರೋಗಿಗಳನ್ನು ನೋಡಿಕೊಳ್ಳುವವರು ಮಾಸ್ಕ್‌ ಮತ್ತು ಕೈಗವಚ ಬಳಸಿರಿ.
  • ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿರಿ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here