ಮಂಗಳೂರು(ಬೆಂಗಳೂರು) : ಇಲ್ಲಿಯ ವಿಶೇಷ ಲೋಕಾಯುಕ್ತ ನ್ಯಾಯಾಲಯವು ಸಹಾಯಕ ಕಮಿಷನರ್ ತಬಸ್ಸುಮ್ ಜಹೇರಾ ಮತ್ತು ಉಪ ತಹಶೀಲ್ದಾರ್ ಶಬ್ಬೀರ್ ಅಹಮದ್ ಅವರಿಗೆ ಲಂಚ ಕೇಳಿದ ಮತ್ತು ಸ್ವೀಕರಿಸಿದ ಆರೋಪದಲ್ಲಿ ದೋಷಿ ಎಂದು ತೀರ್ಪು ನೀಡಿದ್ದು ಇಬ್ಬರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ತಬಸ್ಸುಮ್ ಜಹೇರಾ ಪ್ರಸ್ತುತ ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಹ್ಮದ್ ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದಾರೆ. ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಆವರಗೆರೆ ನಿವಾಸಿ ವಿ ಟಿ ಜಯರಾಂ ಎಂಬುವರು ತಮ್ಮ ತಂದೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದ್ದು, ತಂದೆಯ ಹೆಸರಿಗೆ ಜಮೀನಿನ ದಾಖಲೆಗಳನ್ನು ವರ್ಗಾಯಿಸಿ ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಕೋರಿ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸಹಾಯಕ ಕಮೀಷನರ್ ತನ್ನ ಕಚೇರಿಯ ಸಿಬ್ಬಂದಿ ಶಬ್ಬೀರ್ ಅವರನ್ನು ಭೇಟಿಯಾಗುವಂತೆ ತಿಳಿಸಿದ್ದರು, ಅದರಂತೆ ಶಬೀರ್ ಅವರನ್ನು ಭೇಟಿಯಾದಾಗ 35,000 ರೂ.ಲಂಚ ಕೇಳಿದ್ದರು. ಲಂಚ ಕೊಟ್ಟರೂ ದಾಖಲೆ ಸರಿಪಡಿಸಲು ಸತಾಯಿಸಿದ್ದಲ್ಲದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಜಯರಾಮ್ ಸಭೆಯೊಂದರಲ್ಲಿ ಅಧಿಕಾರಿಗಳ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಮೇ 23, 2017 ರಲ್ಲಿ ಆಡಿಯೋ ಟೇಪ್ ಸಹಿತ ಎಸಿಬಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಇಬ್ಬರು ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ತಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.