ಕನಕಗಿರಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗಾಯತ್ರಿ ತಿಮ್ಮಾರೆಡ್ಡಿಗೆ  ₹21 ಲಕ್ಷ ಮೋಸ

ಮಂಗಳೂರು (ಕೊಪ್ಪಳ): ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯ ಕನಕಗಿರಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪದಡಿ ಮೂವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಜು.19ರಂದು ಎಫ್‌ಐಆರ್‌ ದಾಖಲಾಗಿದೆ.


ಗಾಯತ್ರಿ ಎನ್ನುವವರು ಟಿಕೆಟ್‌ ಆಕಾಂಕ್ಷಿಯಾಗಿದ್ದು, ಶಾಸಕರಾಗಿದ್ದ ಬಸವರಾಜ ದಢೇಸೂಗೂರು ಕೂಡ ಟಿಕೆಟ್‌ ಗಿಟ್ಟಿಸಲು ಕಸರತ್ತು ನಡೆಸಿದ್ದರು. ಪತ್ನಿಗೆ ಹೇಗಾದರೂ ಮಾಡಿ ಟಿಕೆಟ್‌ ಕೊಡಿಸಲೇಬೇಕು ಎಂದು ಗಾಯತ್ರಿ ಪತಿ ತಿಮ್ಮಾರೆಡ್ಡಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಇದೇ ವೇಳೆ ಅವರ ಸ್ನೇಹಿತ ಬೆಂಗಳೂರಿನ ಜೀತು ಎಂಬುವರ ಮೂಲಕ ದೆಹಲಿ ಮೂಲದ ವಿಶಾಲನಾಗ್‌ ಎಂಬ ವ್ಯಕ್ತಿ ಪರಿಚಯವಾಗಿದ್ದ. ವಿಶಾಲನಾಗ್‌ ತನ್ನನ್ನು ಬಿಜೆಪಿಯ ಸೆಂಟ್ರಲ್‌ ಸರ್ವೆ ತಂಡದ ಮುಖಸ್ಥ ಎಂದು ಪರಿಚಯ ಮಾಡಿಕೊಂಡಿದ್ದ.

ಬಿಜೆಪಿ ಟಿಕೆಟ್‌ ನೀಡುವ ಕುರಿತು ಅಮಿತ್‌ ಶಾ ಮತ್ತು ಅರುಣ್‌ ಸಿಂಗ್‌ ಅವರಿಂದ ಈ ಸರ್ವೆ ನಡೆಯುತ್ತಿದೆ. ಸರ್ವೆಯಲ್ಲಿ ನಿಮ್ಮ ಪತ್ನಿಯ ಹೆಸರು ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೆ ತಂದು ಟಿಕೆಟ್‌ ಕೊಡಿಸುವ ಅವಕಾಶ ನನ್ನ ಕೈಯಲ್ಲಿದೆ. ಪಕ್ಷದ ವರಿಷ್ಠರಿಗೆ ಸಲ್ಲಿಸುವ ಅಂತಿಮ ವರದಿಯಲ್ಲಿ ಗಾಯತ್ರಿ ಹೆಸರು ಮೊದಲ ಸ್ಥಾನದಲ್ಲಿ ಬರಲಿದೆ. ಇದಕ್ಕಾಗಿ ನಮ್ಮ ಸರ್ವೆ ತಂಡದ ಹುಡುಗರಿಗೆ ಹಣ ನೀಡಬೇಕು ಎಂದಿದ್ದ. ಇದನ್ನೇ ನಿಜವೆಂದು ನಂಬಿದ್ದ ತಿಮ್ಮಾರೆಡ್ಡಿ ₹2 ಲಕ್ಷ ಬ್ಯಾಂಕ್‌ ಖಾತೆ ಮೂಲಕ ಮತ್ತು ₹19 ಲಕ್ಷ ನಗದು ನೀಡಿದ್ದರು.

ವಿಶಾಲನಾಗ್‌ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ತಂಗಿದ್ದಾಗ ಅಲ್ಲಿ ಹಣ ನೀಡಿದ್ದೆ. ಟಿಕೆಟ್‌ ಸಲುವಾಗಿ ವಿಶಾಲನಾಗ್‌ ಕರೆದ ಕಾರಣಕ್ಕೆ ನವದೆಹಲಿಗೆ ಹೋಗಿ ನಾಲ್ಕು ದಿನ ಉಳಿದುಕೊಂಡಿದ್ದೆ. ಅಂತಿಮವಾಗಿ ಟಿಕೆಟ್‌ ಘೋಷಣೆಯಾದಾಗ ನನ್ನ ಪತ್ನಿಯ ಹೆಸರು ಇರಲಿಲ್ಲ. ಈ ಬಗ್ಗೆ ಕೇಳಲು ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಬಳಿಕ ಕೆಲ ದಿನ ಬಿಟ್ಟು ಹಣ ಕೊಡುತ್ತೇನೆ ಎಂದು ಹೇಳಿದ. ಇದುವರೆಗೂ ಹಣ ನೀಡಿಲ್ಲ ಎಂದು ತಿಮ್ಮಾರೆಡ್ಡಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಅಶೋಕ ನಗರ ಠಾಣೆ ಪೊಲೀಸರು ವಿಶಾಲನಾಗ್‌, ಸ್ನೇಹಿತ ಗೌರವ್ ಮತ್ತು ಜಿತು ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here