ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಮತ್ತು ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಆತಂಕ ಸೃಷ್ಟಿಸಿದ್ದು, ಈಗ ಒಡಿಶಾದಲ್ಲಿ ಉಣುಗು ಮತ್ತು ಪ್ರಾಣಿಗಳಿಂದ ಹರಡುವ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಡಿಶಾ ಸರಕಾರ ರಾಜ್ಯದಲ್ಲಿ ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪಿರೋಸಿಸ್ ಅಂದರೆ ಪ್ರಾಣಿಗಳ ಮಲ, ಮೂತ್ರಗಳಿಂದ ಹರಡುವ ಕಾಯಿಲೆ ತಡೆಯಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೆ.14ರಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಬರ್ಗರ್ ಜಿಲ್ಲೆಯಲ್ಲಿ ಈ ಕಾರಣದಿಂದ 5 ಮಂದಿ ಮೃತಪಟ್ಟಿದ್ದಾರೆ. ಸ್ಕ್ರಬ್ ಟೈಫಸ್ ಸೋಂಕು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿಯೂ ಕಂಡುಬಂದಿದ್ದು, ಶಿಮ್ಲಾದಲ್ಲಿ ಈಗಾಗಲೇ 9 ಮಂದಿ ಇದೇ ಕಾರಣದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶೀತ, ತಲೆನೋವು, ಸ್ನಾಯು ನೋವು, ಜ್ವರ, ಮಾನಸಿಕ ಅಸ್ವಸ್ಥತೆ, ರಕ್ತಸ್ರಾವ, ಅಂಗಾಂಗ ವೈಫಲ್ಯ ಈ ರೋಗದ ಲಕ್ಷಣವಾಗಿದ್ದು, ಆರಂಭದಲ್ಲೇ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಸ್ಕ್ರಬ್ ಟೈಫಸ್ ತಡೆಗಟ್ಟಲು ಯಾವುದೇ ಲಸಿಕೆ ಕಂಡು ಹಿಡಿಯಲಾಗಿಲ್ಲ. ಸೋಂಕಿತ ಕೀಟಗಳಿಂದ ದೂರುವಿರುವ ಮೂಲಕ ಅಪಾಯದಿಂದ ದೂರವಾಗಬಹುದು. ಅದರಲ್ಲೂ ಪರಾವಲಂಬಿ ಕೀಟ ಉಣುಗು ಸೋಂಕನ್ನು ಹರಡುವುದರಿಂದ ಅದರ ಕಡಿತದಿಂದ ದೂರವಿರಬೇಕು. ಉಣುಗು ಜಾನುವಾರು, ಕುರಿ, ನಾಯಿ, ಆಡು ಮುಂತಾದ ಪ್ರಾಣಿಗಳ ರಕ್ತ ಹೀರಿ ಬದುಕುತ್ತದೆ.