ಮಂಗಳೂರು(ಬೆಂಗಳೂರು): ಚೈತ್ರಾ ಕುಂದಾಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಕುರಿತು ನಡೆಸಿದ್ದಾರೆನ್ನಲಾದ ವಂಚನೆ ಆರೋಪದ ಕುರಿತು ನನಗೆ ಮೂರು ತಿಂಗಳ ಹಿಂದೆಯೇ ತಿಳಿದಿತ್ತು. ಈ ಬಗ್ಗೆ ನಾನು ಚಕ್ರವರ್ತಿ ಸೂಲಿಬೆಲೆಯವರಲ್ಲಿ ಪ್ರಸ್ತಾಪಿಸಿದ್ದೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಈ ಕುರಿತಂತೆ ಮಾತನಾಡಿರುವ ಅವರು, ಕೆಲವು ದಿನಗಳ ಹಿಂದೆ ಸತ್ಯಜಿತ್ ಸುರತ್ಕಲ್ ಕರೆ ಮಾಡಿ ಗೋವಿಂದ ಬಾಬು ಪೂಜಾರಿ ಅವರಿಂದ ಹಣ ತೆಗೆದುಕೊಂಡಿದ್ದರೆ ಅದನ್ನು ಹಿಂದಿರುಗಿಸಬೇಕು ಎಂದು ಹೇಳಿದ್ದರು. ಅವರ ಮಾತು ಕೇಳಿ ಕೋಪಗೊಂಡ ನಾನು ಆರೋಪದ ಕುರಿತು ಪ್ರಶ್ನಿಸಿದಾಗ ಅವರು ಕರೆ ಕಡಿತಗೊಳಿಸಿದ್ದರು. ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿದ ಸತ್ಯಜಿತ್, ಅದು ನೀವಲ್ಲ, ಅಭಿನವ ಹಾಲಶ್ರೀ ಎಂದು ತಿಳಿಸಿದ್ದರಿಂದ ನಾನು ಮತ್ತೆ ಕೋಪಗೊಂಡು, ವಿಚಾರ ತಿಳಿಯದೆ ನನ್ನ ಮೇಲೆ ವೃಥಾ ಆರೋಪ ಮಾಡಿದ್ದೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದೆ. ಇದಾದ ಬಳಿಕ ನಾನು ಚಕ್ರವರ್ತಿ ಸೂಲಿಬೆಲೆಯರನ್ನು ಸಂಪರ್ಕಿಸಿ, ಅಭಿನವ ಹಾಲಶ್ರೀ ನಿಮ್ಮ ಯುವ ಬ್ರಿಗೇಡ್ ನಲ್ಲೂ ಮುಖ್ಯಸ್ಥರಾಗಿದ್ದಾರೆ. ಚೈತ್ರಾ ಕುಂದಾಪುರದಂತವರಿಂದ ಕಳಂಕ ಮೆತ್ತಿಕೊಳ್ಳುತ್ತದೆ ಎಂದಾಗ, ಚಕ್ರವರ್ತಿ ಸೂಲಿಬೆಲೆಯವರು ಹೀಗೊಂದು ಸುದ್ದಿ ಹರಿದಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ನಾನು ಸಿ.ಟಿ.ರವಿಯವರಲ್ಲಿ ಮಾತನಾಡಿದ್ದೇನೆ ಎಂದು ಹೇಳಿದ್ದಾಗಿ ಸ್ವಾಮೀಜಿ ವಿವರಿಸಿದ್ದಾರೆ. ಬಳಿಕ ನೇರವಾಗಿ ಚೈತ್ರಾ ಕುಂದಾಪುರಗೆ ಕರೆ ಮಾಡಿ ಕೇಳಿದಾಗ ಅವಳು ಸಂಪೂರ್ಣವಾಗಿ ಈ ಆರೋಪವನ್ನು ತಳ್ಳಿಹಾಕಿರುವುದಾಗಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದು, ಈ ಬಗ್ಗೆ ನಮಗೆ ಸತ್ಯ ಹೇಳಲು ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.