ಮಂಗಳೂರು(ಕುವೈತ್): ನಗರದ ಮಲಿಯಾದಲ್ಲಿರುವ ಖಾಸಗಿ ಕ್ಲಿನಿಕ್ ಮೇಲೆ ಕುವೈತ್ ಮಾನವ ಸಂಪನ್ಮೂಲ ಸಮಿತಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೇರಳ ಮೂಲದ 19 ದಾದಿಯರು ಸೇರಿದಂತೆ 30 ಮಂದಿ ಭಾರತೀಯರು ಜೈಲು ಸೇರಿದ್ದಾರೆ.
ಕುವೈತ್ ಗೃಹ ಸಚಿವಾಲಯದ ಪ್ರಕಾರ, ದಾದಿಯರು ಕುವೈತ್‌ನಲ್ಲಿ ಕೆಲಸ ಮಾಡಲು ಸೂಕ್ತವಾದ ಪರವಾನಿಗೆಗಳನ್ನು ಹೊಂದಿಲ್ಲ ಅಥವಾ ಅಗತ್ಯ ಅರ್ಹತೆಗಳನ್ನು ಹೊಂದಿಲ್ಲ ಎಂದು ಆರೋಪಿಸಿ ಬಂಧಿಸಲಾಗಿದೆ. ಆದರೆ ಕೇರಳ ಮೂಲದ ದಾದಿಯರ ಸಂಬಂಧಿಕರ ಪ್ರಕಾರ, ಕುವೈತ್‌ನಲ್ಲಿ ವಿದೇಶಿ ರೆಸಿಡೆನ್ಸಿ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 30 ಭಾರತೀಯರು ಸೇರಿದಂತೆ 60 ಜನರು ದಾಳಿಯ ಸಮಯದಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಕೇರಳದ ದಾದಿಯರ ಕುಟುಂಬದ ಸದಸ್ಯರು ಅವರು ಅರ್ಹತೆ ಹೊಂದಿದ್ದಾರೆ ಮತ್ತು ಸರಿಯಾದ ಕೆಲಸದ ವೀಸಾ ಮತ್ತು ಪ್ರಾಯೋಜಕತ್ವದೊಂದಿಗೆ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರಲ್ಲಿ ಹಲವರು ಕಳೆದ ಮೂರರಿಂದ 10 ವರ್ಷಗಳಿಂದ ಒಂದೇ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಫಿಲಿಪೈನ್ಸ್, ಈಜಿಪ್ಟ್ ಮತ್ತು ಇರಾನ್‌ನ ಜನರು ಸಹ ಇದೇ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದು, ಮಾಲೀಕರು ಮತ್ತು ಪ್ರಾಯೋಜಕರ ನಡುವಿನ ವಿವಾದವು ದಾಳಿ ಮತ್ತು ಬಂಧನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಬಂಧಿತ ನರ್ಸ್‌ಗಳ ಪೈಕಿ ಐವರು ಹಾಲುಣಿಸುವ ತಾಯಂದಿರಾಗಿದ್ದು, ಹಾಲುಣಿಸಲು ಪ್ರತಿದಿನ ಮಗುವನ್ನು ಬಂಧಿಖಾನೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಪತಿಯಂದಿರದ್ದಾಗಿದ್ದು ದಾದಿಯರ ಶೀಘ್ರ ಬಿಡುಗಡೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಾಯಭಾರಿ ಕಚೇರಿಯ ಮಧ್ಯಸ್ಥಿಕೆ ವಹಿಸುವಂತೆ ದಾದಿಯರ ಕುಟುಂಬಸ್ಥರು ಆಗ್ರಹಿಸಿದ್ದಾರೆ.