ಚಂದ್ರಯಾನ-3ರ ಯಶಸ್ಸು-ಶ್ರಮಿಸಿದಾತನಿಗೆ  ಸಿಗದ ಸಂಬಳದ ಕಾಸು-ಭಗ್ನಗೊಂಡ ಕನಸು-ಬದುಕಿಗಾಗಿ ತಳ್ಳುಗಾಡಿಯಲ್ಲಿ ಇಡ್ಲಿ ಮಾರಾಟ-ಪಿಐಬಿ ಫಾಸ್ಟ್‌ ಚೆಕ್‌ ನಲ್ಲಿ ತಿಳಿದು ಬಂದಿದ್ದೇ ಬೇರೆ

ಮಂಗಳೂರು(ಜಾರ್ಖಂಡ್): ಬಾಹ್ಯಾಕಾಶ ಲೋಕದಲ್ಲಿ  ಮಹತ್ತರ ಸಾಧನೆ ಮಾಡಿದ ಚಂದ್ರಯಾನ -3ರ ಯಶಸ್ಸಿನಲ್ಲಿ ಪಾಲುದಾರನಾದ ಎಲೆಕ್ಟ್ರಿಶಿಯನ್ ಒಬ್ಬರ ಬದುಕು ಬೀದಿಗೆ ಬಂದಿದ್ದು ಕುಟುಂಬ ನಿರ್ವಹಣೆಗಾಗಿ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುವ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಬಿಬಿಸಿ ವರದಿ ಮಾಡಿದೆ.

ಇಸ್ರೋ ಚಂದ್ರಯಾನ-3ರ ಯಶಸ್ಸಿನಲ್ಲಿ ತಂತ್ರಜ್ಞನಾಗಿ ಕೆಲಸ ಮಾಡಿದ್ದ ಮಧ್ಯಪ್ರದೇಶದ ದೀಪಕ್ ಕುಮಾರ್ ಉಪ್ರಾರಿಯಾ ಜೀವನ ಸಾಗಿಸಲು ರಸ್ತೆಬದಿಯಲ್ಲಿ ಇಡ್ಲಿ ಮಾರುತ್ತಿದ್ದಾರೆ. ಸರ್ಕಾರಿ ಕಂಪೆನಿಯಾದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಇಸ್ರೋದ ಚಂದ್ರಯಾನ-3ರ  ಉಡಾವಣಾ ಪ್ಯಾಡ್ ನಿರ್ಮಿಸಿದೆ. ಈ ಲಾಂಚ್ ಪ್ಯಾಡ್ ನಿರ್ಮಿಸಲು ಸುಮಾರು 2,800 ಟೆಕ್ನೀಶಿಯನ್ ಗಳು ಹಗಲಿರುಳು ಶ್ರಮಿಸಿದ್ದರು. ಇವರಲ್ಲಿ ದೀಪಕ್ ಕುಮಾರ್ ಕೂಡ ಒಬ್ಬರು. 2012ರಲ್ಲಿ ಖಾಸಗಿ ಕಂಪನಿ ಉದ್ಯೋಗ ತೊರೆದು 8,000 ರೂ. ಸಂಬಳಕ್ಕಾಗಿ ಉದ್ಯೋಗ ಭದ್ರತೆಯ ಹಿನ್ನೆಲೆಯಲ್ಲಿ ಸರ್ಕಾರಿ ಕಂಪನಿಯಾದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲಸಕ್ಕೆ ಸೇರಿದ್ದರು.  ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಲ್ಯಾಂಡ್ ಆಗುವ ಮೂಲಕ ಯಶಸ್ಸಾಗಿತ್ತು. ದೇಶ ಈ ಸಾಧನೆಯನ್ನು ಸಂಭ್ರಮಿಸುತ್ತಿದ್ದರೆ ಇನ್ನೊಂದೆಡೆ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ನ  ನೌಕರರು ತಮ್ಮ 18 ತಿಂಗಳ ಬಾಕಿ ವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರು.

ದೀಪಕ್‌ ರಾಂಚಿಯ ಹಳೆಯ ವಿಧಾನ ಸಭೆ ಎದುರು ಇಡ್ಲಿ ಅಂಗಡಿ ತೆರೆದಿದ್ದು, ಕಳೆದ ಕೆಲವು ದಿನಗಳಿಂದ ಇಡ್ಲಿಗಳನ್ನು ಮಾರುತ್ತಿದ್ದೇನೆ. ನಾನು ಆಫೀಸ್ ಕೆಲಸದೊಂದಿಗೆ ಈ ಕೆಲಸವನ್ನೂ ಮಾಡುತ್ತಿದ್ದೇನೆ. ಬೆಳಗ್ಗೆ ಇಡ್ಲಿ ಮಾರುತ್ತೇನೆ. ಮಧ್ಯಾಹ್ನ ಆಫೀಸ್ ಕೆಲಸಕ್ಕೆ ಹೋಗುತ್ತೇನೆ. ಸಂಜೆ ಮನೆಗೆ ಹೋಗುವ ಮುನ್ನ ಮತ್ತೆ ಇಡ್ಲಿ ಮಾರುತ್ತೇನೆ ಎಂದು ಹೇಳುತ್ತಾರೆ. ಮೊದಲಿಗೆ ನಾನು ಕ್ರೆಡಿಟ್ ಕಾರ್ಡ್‌ ನಲ್ಲಿ ನನ್ನ ಮನೆಯ ಖರ್ಚುನ್ನು ನಿರ್ವಹಿಸಿದೆ. ಬಳಿಕ ಸಂಬಂಧಿಕರಿಂದ ಸಾಲ ಪಡೆದೆ. ಇಲ್ಲಿಯವರೆಗೆ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂತಿರುಗಿಸದ ಕಾರಣ ಈಗ ಜನ ಸಾಲ ಕೊಡುವುದನ್ನು ನಿಲ್ಲಿಸಿದ್ದಾರೆ. ಪತ್ನಿಯ ಒಡವೆಗಳನ್ನು ಅಡವಿಟ್ಟು ಬರಬೇಕಾಗಿದ್ದ ಸಂಬಳ ಕಾಯುತ್ತಾ ದಿನ ದೂಡುತ್ತಿದ್ದೇನೆ ಎಂದು, ಪಾವತಿಯಾಗದ ಸಂಬಳದ ಕುರಿತು ಹೇಳುತ್ತಾರೆ.

ನನ್ನ ಹೆಂಡತಿ ಒಳ್ಳೆಯ ಇಡ್ಲಿಗಳನ್ನು ಮಾಡುತ್ತಾಳೆ. ಅವುಗಳನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂ. ವ್ಯಾಪಾರವಾಗುತ್ತದೆ. ಇದರಿಂದ 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆಯ ಖರ್ಚು ನಿಭಾಯಿಸುತ್ತಿದ್ದೇನೆ ಎಂದು ಅವರು ಹೇಳಿದರು. ನನಗೆ ಇಬ್ಬರು ಹೆಣ್ಣುಮಕ್ಕಳು. ಅವರು ಶಾಲೆಗೆ ಹೋಗುತ್ತಾರೆ. ಈ ವರ್ಷ ನಾನು ಅವರ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಪ್ರತಿದಿನ ನೋಟಿಸ್ ಬರುತ್ತಲೇ ಇದೆ. ತರಗತಿಯಲ್ಲಿಯೂ ಶಿಕ್ಷಕರು ಎಚ್ಇಸಿಯಯಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳು ಯಾರು ಎಂದು ಕೇಳಿ, ಎದ್ದು ನಿಲ್ಲಲು ಹೇಳುತ್ತಾರೆ. ಇದರಿಂದ ನನ್ನ ಮಕ್ಕಳಿಗೂ ಅವಮಾನವಾಗುತ್ತಿದೆ. ಅವರು ಅಳುತ್ತಾ ಮನೆಗೆ ಬರುತ್ತಾರೆ. ಅವರು ಅಳುವುದನ್ನು ನೋಡಿ ನನ್ನ ಕಣ್ಣಂಚು ಭಾರವಾಗುತ್ತದೆ. ಮಕ್ಕಳ ಮುಂದೆ ನಾನು ಅಳುವುದಿಲ್ಲ. ನೋವು ನುಂಗಿಕೊಂಡೇ ದಿನ ದೂಡುತ್ತಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆದರೆ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಗೆ ಚಂದ್ರಯಾನ-3ರ ಯಾವುದೇ ಘಟಕಗಳ ತಯಾರಿಕೆಯನ್ನು ವಹಿಸಿಕೊಟ್ಟಿಲ್ಲ. 2003ರಿಂದ 2010ರ ನಡುವೆ ಇಸ್ರೋ ಗೆ ಕೆಲವು ಮೂಲ ಸೌಕರ್ಯಗಳನ್ನು ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಪೂರೈಸಿದೆ ಎಂದು ಸರಕಾರದ ಪಿಐಬಿ ಫಾಸ್ಟ್‌ ಚೆಕ್‌ ಮಾಡಿ ಟ್ವೀಟ್‌ ಮಾಡಿದೆ. ಕಂಪೆನಿಗಳ ಕಾಯ್ದೆಯಡಿ ನೊಂದಾಯಿತ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಪ್ರತ್ಯೇಕ ಕಾನೂನು ಘಟಕವಾಗಿದೆ ಮತ್ತು ಬಿಹೆಚ್‌ಇಎಲ್ ನಂತಹ ತನ್ನದೇ ಆದ ಸಂಪನ್ಮೂಲಗಳನ್ನು ಅದು ಉತ್ಪಾದಿಸುತ್ತದೆ ಎಂದು  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್‌ ಗುಪ್ತಾ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಂಸತ್‌ ನಲ್ಲಿ ಬೃಹತ್‌ ಕೈಗಾರಿಕಾ ರಾಜ್ಯ ಸಚಿವ ಕಿಶನ್‌ ಪಾಲ್‌ ಗುರ್ಜರ್‌ ಚಂದ್ರಯಾನ-3ಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸವನ್ನು ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಗೆ ನಿಯೋಜಿಸಿಲ್ಲ ಎಂದಿರುವ ದಾಖಲೆಗಳ ಸ್ಕ್ರೀನ್‌ ಶಾಟ್‌ ಗಳನ್ನು ಕಾಂಚನ್‌ ಗುಪ್ತಾ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here