ಯುಪಿಸಿಎಲ್‌ನಿಂದ ಕೇರಳಕ್ಕೆ ವಿದ್ಯುತ್ ಲೈನ್ – ಜಿಲ್ಲೆಯ ಸಂತ್ರಸ್ತ ಜನತೆಗೆ ಗರಿಷ್ಠ ಪರಿಹಾರ ನೀಡಬೇಕು – ಸಚಿವ ದಿನೇಶ್ ಗುಂಡೂರಾವ್ ಸೂಚನೆ

ಮಂಗಳೂರು: ಉಡುಪಿಯ ಯುಪಿಸಿಎಲ್‌ನಿಂದ ಕೇರಳಕ್ಕೆ ವಿದ್ಯುತ್ ಲೈನ್ ಹಾದುಹೋಗುವ ದ.ಕ. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಸಂತ್ರಸ್ತ ಜನತೆಗೆ ಕೇರಳ ಮಾದರಿಯಲ್ಲಿ ಗರಿಷ್ಠ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಗುತ್ತಿಗೆ ಕಂಪನಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಸಂತ್ರಸ್ತರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ಹೈಟೆನ್ಶನ್ ವಿದ್ಯುತ್ ಲೈನ್ ಹಾದುಹೋಗುವ ಕೃಷಿ ಪ್ರದೇಶಗಳಲ್ಲಿ ಸೂಕ್ತ ಪರಿಹಾರ ನೀಡಬೇಕಾಗಿದೆ. ಅಡಕೆ ಹಾಗೂ ತೆಂಗಿನ ಮರಗಳು ಇದ್ದು, ತಂತಿ ಹಾದುಹೋಗುವಲ್ಲಿ ಮತ್ತೆ ಕೃಷಿ ಮಾಡಲು ಸಾಧ್ಯವಿಲ್ಲ. ಕಂಪನಿ ಅಧಿಕಾರಿಗಳು ಜುಜುಬಿ ಮೊತ್ತ ಪರಿಹಾರ ಹೇಳುತ್ತಿದ್ದಾರೆ. ಈಗಾಗಲೇ ಕೇರಳದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಅದರಲ್ಲಿ ಚರ್ಚಿಸಿ ಗರಿಷ್ಠ ಮೊತ್ತದ ಪರಿಹಾರ ನೀಡಿರುವ ಬಗ್ಗೆ ಮಾಹಿತಿ ಇದೆ. ಅದೇ ಮಾನಂದಡವನ್ನು ಇಲ್ಲಿಯೂ ಅಳವಡಿಸಿಕೊಂಡು ಸೂಕ್ತ ಪರಿಹಾರ ನೀಡಬೇಕು ಎಂದು ಸಚಿವರು ಸೂಚಿಸಿದರು. ವಿಶೇಷ ಆರ್ಥಿಕ ವಲಯಕ್ಕೆ ಜಾಗ ನೀಡಿದ ಸ್ಥಳೀಯ ಸಂತ್ರಸ್ತರಿಗೆ ಖಾಯಂ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಂಪನಿ ಆಡಳಿತ ಮಂಡಳಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸಚಿವರು ಈ ಸಂದರ್ಭ ಸೂಚಿಸಿದರು.

ಎಂಎಸ್‌ಇಝಡ್‌ನಲ್ಲಿರುವ ಜೆಬಿಎಫ್ ಕಂಪನಿ ಖಾಯಂ ಉದ್ಯೋಗ ನೀಡದೇ ಇರುವ ಬಗ್ಗೆ ಸಂತ್ರಸ್ತರ ಅಹವಾಲು ಸ್ವೀಕರಿಸಿದ ಬಳಿಕ ಕಂಪನಿ ಅಧಿಕಾರಿಗೆ ಅವರು ಈ ಸೂಚನೆ ನೀಡಿದರು. ಜೆಬಿಎಫ್ ಕಂಪನಿ ಕೈಗಾರಿಕೆಗಾಗಿ ಎಂಎಸ್‌ಇಝಡ್ ಪ್ರದೇಶದ ಅನೇಕ ಮಂದಿ ಜಾಗ ನೀಡಿದ್ದಾರೆ. ಈ ವೇಳೆ ಕಂಪನಿ ಸಂತ್ರಸ್ತರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ 2014ರಲ್ಲಿ ಜೆಬಿಎಫ್ ಕಂಪನಿ 74 ಮಂದಿಯನ್ನು ಉದ್ಯೋಗಕ್ಕೆ ಆಯ್ಕೆ ಮಾಡಿದ್ದು, ನೇಮಕಾತಿ ಪತ್ರವನ್ನೂ ನೀಡಿತ್ತು. ಕೊರೋನ ಬಳಿಕ ಆರ್ಥಿಕ ದುಸ್ಥಿತಿಯನ್ನು ಮುಂದಿರಿಸಿ ಉದ್ಯೋಗದಿಂದ ತೆಗೆದು ಹಾಕಿತ್ತಲ್ಲದೆ, ವೇತನವನ್ನೂ ತಡೆ ಹಿಡಿದಿತ್ತು. ಬಳಿಕ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಬಾಕಿ ವೇತನ ಪಾವತಿ ಮಾಡಿತ್ತು. ಇದೀಗ ಮತ್ತೆ ಉದ್ಯೋಗ ನೀಡಲು ಮುಂದಾಗಿದ್ದು, ಖಾಯಂ ಬದಲು ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಹೊರಟಿದೆ. ಇದರಿಂದ ಸಂತ್ರಸ್ತರು ಉದ್ಯೋಗ ಭರವಸೆಯಿಂದ ವಂಚಿತಗೊಳ್ಳುವಂತಾಗಿದೆ ಎಂದು ಸಂತ್ರಸ್ತರ ನಿಯೋಗ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭ ಸಭೆಯಲ್ಲಿದ್ದ ಕರ್ನಾಟಕ ವಿಧಾನಸಭಾ ಸ್ವೀಕರ್ ಯು.ಟಿ.ಖಾದರ್ ಮಾತನಾಡಿ, ಜೆಬಿಎಫ್ ಸಾರ್ವಜನಿಕ ಕಂಪನಿಯಾಗಿದ್ದು, ಎಂಆರ್‌ಪಿಎಲ್, ಎಂಸಿಎಫ್‌ನಂತೆಯೇ ಅದಕ್ಕೂ ಖಾಯಂ ನೇಮಕಾತಿಗೆ ಅವಕಾಶ ಇದೆ. ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಇರಿಸಿ ಒಪ್ಪಿಗೆ ಪಡೆದು ಕೇಂದ್ರ ಸರಕಾರಕ್ಕೆ ಕಳುಹಿಸಬೇಕು ಎಂದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ದಿವಾಳಿಯಾದ ಕಾರಣ ಕಂಪನಿಯಿಂದ ಉದ್ಯೋಗ ಇಲ್ಲದಿದ್ದರೂ ಈ ಹಿಂದೆ ನೇಮಕಗೊಂಡವರಿಗೆ ಸ್ಟೈಪೆಂಡ್ ಕೊಡಿಸಲಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ವೇತನ ನೀಡಿಲ್ಲ. ಗುತ್ತಿಗೆ ಆಧಾರದ ಬದಲು ಖಾಯಂ ಆಗಿ ನೇಮಕಗೊಳಿಸುವ ಬಗ್ಗೆ ಕಂಪನಿಗೆ ಸೂಚನೆ ನೀಡಲಾಗಿದೆ. ಪ್ರಸಕ್ತ ಕಾಮಗಾರಿ ಆರಂಭವಾಗಿದ್ದು, ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಬೇಕಾಗುತ್ತದೆ ಎಂದಿದ್ದಾರೆ ಎಂದರು.

ಮಧ್ಯಪ್ರವೇಶಿಸಿ ಮಾತನಾಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸೆ.25ರಂದು ಜನತಾದರ್ಶನ ನಡೆಸಲು ನಾನು ಮಂಗಳೂರಿಗೆ ಆಗಮಿಸುತ್ತಿದ್ದೇನೆ. ಆ ವೇಳೆ ಆಡಳಿತ ಮಂಡಳಿ ಮುಖ್ಯಸ್ಥರು, ಜನಪ್ರತಿನಿಧಿಗಳು ಹಾಗೂ ಸಂತ್ರಸ್ತರನ್ನು ಕೂರಿಸಿ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು. ಅಲ್ಲದೆ ಆಡಳಿತ ಮಂಡಳಿ ಸಂತ್ರಸ್ತರಿಗೆ ಖಾಯಂ ಉದ್ಯೋಗ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಈ ಸಭೆಯಲ್ಲಿ ಪ್ರಸ್ತಾಪಗೊಂಡ ವಿಚಾರವನ್ನು ಕಂಪನಿ ಮುಖ್ಯಸ್ಥರಿಗೆ ಜಿಲ್ಲಾಡಳಿತ ಕಳುಹಿಸಬೇಕು. ಸಂಸದರ ನೇತೃತ್ವದಲ್ಲಿ ಸಂತ್ರಸ್ತರು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದರೆ ಉತ್ತಮ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಜಿ.ಪಂ. ಸಿಇಒ ಡಾ.ಆನಂದ್, ಮಹಾನಗರ ಪಾಲಿಕೆ ಆಯುಕ್ತ ಆನಂದ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here