ಮಂಗಳೂರು(ಪುತ್ತೂರು): ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಹೆಸರಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಪಂಗನಾಮ ಹಾಕಿದ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮುಡ್ನೂರು ನಿವಾಸಿಯಾಗಿರುವ ಝೀನತ್ ಬಾನು ಎಂಬವರಿಗೆ 2022 ನೇ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಕರೆ ಮಾಡಿ ತಾನು ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನೀವು ರೂ. 25 ಲಕ್ಷ ರೂಪಾಯಿ ಲಾಟರಿ ಹಣ ಗೆದ್ದಿರುವುದಾಗಿ ಹೇಳಿದ್ದಾನೆ. ನಂತರ ಲಾಟರಿಯಲ್ಲಿ ಗೆದ್ದ ಹಣವನ್ನು ಪಡೆಯಲು ಟ್ಯಾಕ್ಸ್ ಕಟ್ಟುವಂತೆ ಹೇಳಿದ್ದಾನೆ. 2022 ಮೇ ತಿಂಗಳಿನಿಂದ 2023 ಸೆಪ್ಟೆಂಬರ್ 13 ರವರೆಗಿನ ಅವಧಿಯಲ್ಲಿ ತೆರಿಗೆ ಮತ್ತು ಇನ್ನಿತರ ಖರ್ಚಿನ ಬಾಬ್ತು ಎಂದು ಹೇಳಿ ವಿವಿಧ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂ. ಹಣವನ್ನು ವರ್ಗಾಯಿಸಿಕೊಂಡ ಅಪರಿಚಿತ ವ್ಯಕ್ತಿ ಝೀನತ್ ಅವರಿಗೆ ವಂಚಿಸಿದ್ದಾನೆ. ತಾನು ಮೋಸ ಹೋಗುತ್ತಿರುವ ಬಗ್ಗೆ ಅರಿವಾಗುವ ವೇಳೆ ಝೀನತ್ ಸುಮಾರು 12,93,200 ರೂ. ಕಳೆದುಕೊಂಡಿದ್ದರು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್(ಸೆನ್) ಅಪರಾಧ ಪೊಲೀಸ್ ಠಾಣೆಯಲ್ಲಿ ಅಕ್ರ 9.29/2023 do: 66(D), IT act 417 420 IPC ಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.