ಮಂಗಳೂರು(ಹೊಸದಿಲ್ಲಿ): ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯ ಬಳಿಕ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಮತ್ತು ಕ್ಷೇತ್ರಗಳ ಮರು ವಿಂಗಡಣೆ ಕಾರ್ಯ ಆರಂಭವಾಗಲಿದ್ದು, 2029ರ ಚುನಾವಣೆ ವೇಳೆಗೆ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯ ಕನಸು ನನಸಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಯಾವುದೇ ಲೋಪಗಳು ಇದ್ದಲ್ಲಿ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಮುಂದಿನ ಸರ್ಕಾರ ಲೋಕಸಭೆಯಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಮೀಸಲಾತಿ ಪ್ರಕ್ರಿಯೆಯನ್ನು ಆರಂಭಿಸಲು ಚಾಲನೆ ನೀಡಲಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಹಿತಾಸಕ್ತಿಯ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ಇತರ ಹಿಂದುಳಿದ ವರ್ಗಗಳ ಬಗ್ಗೆ ಧ್ವನಿ ಎತ್ತುತ್ತಿರುವ ಪಕ್ಷಗಳು ಎಂದೂ ಹಿಂದುಳಿದವರನ್ನು ಪ್ರಧಾನಿ ಮಾಡಿಲ್ಲ. ಆದರೆ ಬಿಜೆಪಿ ಅದನ್ನು ಮಾಡಿದೆ ಎಂದು ಸಮರ್ಥಿಸಿಕೊಂಡರು.
ಪಾರದರ್ಶಕತೆಯನ್ನು ಖಾತರಿಪಡಿಸುವ ಸಲುವಾಗಿ ಮತ್ತು ಯಾವುದೇ ಶಂಕಿತ ಕುಚೋದ್ಯವನ್ನು ತೊಡೆದುಹಾಕುವ ಸಲುವಾಗಿ ಮಹಿಳೆಯರಿಗೆ ಮೀಸಲಿಡುವ ಕ್ಷೇತ್ರಗಳನ್ನು ನಿರ್ಧರಿಸುವ ಹೊಣೆಯನ್ನು ಕ್ಷೇತ್ರ ಪುನರ್ ವಿಂಗಡಣೆ ಸಮಿತಿಗೆ ವಹಿಸಲಾಗುವುದು. ಇಲ್ಲದಿದ್ದರೆ ವಯನಾಡ್ ಮತ್ತು ಹೈದರಾಬಾದ್ ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಟ್ಟರೆ, ಸರ್ಕಾರದ ಮೇಲೆ ಗೂಬೆ ಕೂರಿಸಬಹುದು ಎಂದರು. ಮೊದಲು ಮಸೂದೆ ಆಂಗೀಕರಿಸುವ ಅಗತ್ಯವಿದೆ. ಆ ಬಳಿಕ ಯಾವುದೇ ಲೋಪಗಳು ಇದ್ದಲ್ಲಿ ಅದನ್ನು ಬಗೆಹರಿಸಬಹುದು ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಇತರ ಹಿಂದುಳಿದ ವರ್ಗಗಳ ಸಬಲೀಕರಣದ ಬಗ್ಗೆ ಕೇವಲ ಬಾಯಿ ಮಾತಿನ ಕಾಳಜಿ ಹೊಂದಿವೆ ಎಂದು ಟೀಕಿಸಿದರು.