ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಓಡಾಟ ಸ್ಥಗಿತಗೊಳಿಸಿದ್ದ ಪುತ್ತೂರು- ಮಂಜೇಶ್ವರ ನಡುವಣ ಕೆ ಬಿ ಟಿ ಅಂತಾರಾಜ್ಯ ಸಾರಿಗೆ ಬಸ್ ಮತ್ತೆ ರಸ್ತೆಗಿಳಿದಿದೆ. ಇಂದಿನಿಂದ (ಸೆ. 21) ಪುತ್ತೂರು- ಮಂಜೇಶ್ವರ ನಡುವೆ ಸಂಚಾರ ಆರಂಭಗೊಂಡಿರುವುದಾಗಿ ಕೆ ಬಿ ಟಿ ಬಸ್ ಮಾಲಕ ದೇವಂದಪಡ್ಪು ಐತಪ್ಪ ಶೆಟ್ಟಿ ತಿಳಿಸಿದ್ದಾರೆ.
ಕಳೆದ ಮೂರೂವರೆ ವರ್ಷಗಳಿಂದ ಬಸ್ ನ ಓಡಾಟ ಇಲ್ಲದೆ ಈ ಭಾಗದ ಅವಲಂಬಿತ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಬಸ್ ಸಂಚಾರ ಸ್ಥಗಿತಗೊಂಡ ಬಳಿಕ ಪರ್ಯಾಯ ವ್ಯವಸ್ಥೆ ಇಲ್ಲದೇ ಇರುವುದು ಇದಕ್ಕೆ ಕಾರಣವಾಗಿತ್ತು. ಮಂಜೇಶ್ವರ, ಮೀಯಾಪದವು, ಸುಂಕದಕಟ್ಟೆ, ಆನೆಕಲ್ಲು ,ಕನ್ಯಾನ ವಿಟ್ಲ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ದೈನಂದಿನ ವ್ಯವಹಾರಕ್ಕೆ ಓಡಾಡುವ ಜನರು ಈ ಬಸ್ ಅನ್ನು ಆಶ್ರಯಿಸಿದ್ದು ಬಸ್ ಪುನರ್ ಸಂಚಾರ ಜನರಿಗೆ ಖುಷಿ ತಂದಿದೆ. ಮಂಜೇಶ್ವರದಿಂದ ಬೆಳಗ್ಗೆ 6.40 ಕ್ಕೆ ಹೊರಟು ಬೆಳಗ್ಗೆ 9 ಗಂಟೆಗೆ ಪುತ್ತೂರು ತಲುಪಲಿರುವ ಬಸ್ಸು ಪುತ್ತೂರಿನಿಂದ ಬೆಳಗ್ಗೆ 10 .30 ಕ್ಕೆ ಬಸ್ ಹೊರಟು ಮಧ್ಯಾಹ್ನ ಒಂದು ಗಂಟೆಗೆ ಮಂಜೇಶ್ವರಕ್ಕೆ ತಲುಪಲಿದೆ. ಮಂಜೇಶ್ವರದಿಂದ 2.40 ಕ್ಕೆ ಹೊರಟು ಐದು ಗಂಟೆಗೆ ಪುತ್ತೂರು ತಲುಪಲಿರುವ ಬಸ್ಸು ಮತ್ತೆ ಪುತ್ತೂರಿನಿಂದ ಸಂಜೆ 5.40 ಕ್ಕೆ ಹೊರಟು ರಾತ್ರಿ ಎಂಟು ಗಂಟೆಗೆ ಮಂಜೇಶ್ವರ ತಲುಪಲಿದೆ.