ಕಾವೇರಿ ಜಲವಿವಾದ- ಸುಪ್ರೀಂಕೋರ್ಟಿನಲ್ಲಿ  ಕರ್ನಾಟಕಕ್ಕೆ ಹಿನ್ನಡೆ – 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ನಿರ್ದೇಶನ

ಮಂಗಳೂರು: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ ನೀಡಿದ್ದು, ತಮಿಳುನಾಡಿಗೆ ಮುಂದಿನ 15 ದಿನ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್ ನೀರು ಹರಿಸಲು ತಿಳಿಸಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಸಿಎಡಬ್ಲ್ಯು ಎಂಎ ಆದೇಶದಲ್ಲಿ ಮಧ್ಯ ಪ್ರವೇಶಿಸಲು ನಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಈ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕರ್ನಾಟಕವು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಮನವಿಯನ್ನು ತ್ರಿಸದಸ್ಯ ಪೀಠವು ಮಾನ್ಯ ಮಾಡದೆ ತಿರಸ್ಕರಿಸಿದೆ. ಮಾತ್ರವಲ್ಲದೆ ಉಭಯ ರಾಜ್ಯಗಳ ರೈತರು ತಮ್ಮ ವಾದವನ್ನೂ ಆಲಿಸಲು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಲೂ ಪೀಠ ನಿರಾಕರಿಸಿದೆ.

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​ ನೀರು ಬಿಡುವಂತೆ ಸೂಚನೆ ನೀಡಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿತ್ತು. ಈ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ತಮಿಳುನಾಡಿಗೆ ಸೆಪ್ಟೆಂಬರ್​ 13ರಿಂದ ಅನ್ವಯವಾಗುವಂತೆ 15 ದಿನಗಳ ಕಾಲ ಪ್ರತಿದಿನ ಐದು ಸಾವಿರ ಕ್ಯೂಸೆಕ್​ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ತಮಿಳುನಾಡು ಪರ ವಕೀಲರಾದ ಮುಕುಲ್​ ರೋಹಟಗಿ ಮತ್ತು ಕರ್ನಾಟಕದ ಪರ ವಕೀಲ ಶ್ಯಾಮ್​ ದಿವಾನ್​ ತಮ್ಮ ತಮ್ಮ ವಾದವನ್ನು ಮಂಡಿಸಿದರು.

 

LEAVE A REPLY

Please enter your comment!
Please enter your name here