ಇಂದಿನಿಂದ ಪ್ರತಿ ಶನಿವಾರ ಪಕ್ಷಾತೀತವಾಗಿ ಶಾಸಕರ ಮತ್ತು ಸಂಸದರ ಭೇಟಿಗೆ ಸಿಎಂ ನಿರ್ಧಾರ

ಮಂಗಳೂರು (ಬೆಂಗಳೂರು): ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ಪ್ರತಿ ಶನಿವಾರ ಪಕ್ಷಾತೀತವಾಗಿ ರಾಜ್ಯದ ಎಲ್ಲಾ ಶಾಸಕರು, ವಿಧಾನ ಪರಿಷತ್​ ಸದಸ್ಯರು ಮತ್ತು ಸಂಸದರನ್ನು ಭೇಟಿ ಮಾಡಲಿದ್ದಾರೆ. ಶಾಸಕರ ಮತ್ತು ವಿಧಾನ ಪರಿಷತ್​ ಸದಸ್ಯರ ಅಹವಾಲುಗಳಿಗೆ ಸ್ಪಂದಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರಕ್ಕೊಂದು ದಿನ ತಮ್ಮ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ. ಪ್ರತಿ ಶನಿವಾರದಂದು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಮಯ ನಿಗದಿ ಮಾಡಲಾಗಿದೆ. ಇಂದಿನಿಂದ ಶಾಸಕರ ಸಿಎಂ ಭೇಟಿ ಕಾರ್ಯಕ್ರಮ ಪ್ರಾರಂಭವಾಗಿದ್ದು, ಗೃಹ ಕಛೇರಿ ಕೃಷ್ಣಾದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಭೇಟಿ ಕಾರ್ಯ ನಡೆದಿದೆ. ಮುಂದಿನ ವಾರ ಮುಖ್ಯಮಂತ್ರಿಗಳ ಸಮಯ ಅವಕಾಶ ಲಭ್ಯತೆ ಆಧಾರದಲ್ಲಿ ಶಾಸಕರು, ಸಂಸದರಿಗೆ ಸಿಎಂ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಈ ಭೇಟಿ ಕಡ್ಡಾಯವಾಗಿರುವುದಿಲ್ಲ ಎಂದು ಈ ಸಂಬಂಧ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ. ಚಿರಂಜೀವಿ ಪ್ರಕಟಣೆ ಹೊರಡಸಿದ್ದಾರೆ.

ಇತ್ತೀಚಿಗೆ ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಕಾಂಗ್ರೆಸ್​ ಪಕ್ಷದ ಕೆಲವು ಶಾಸಕರು, ವಿವಿಧ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದು ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ, ಶಾಸಕರ ಭೇಟಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here