ಕೆಂಜಾರಿನಲ್ಲಿ ನಿರ್ಮಾಣವಾಗಲಿದೆ ಕೋಸ್ಟ್‌ಗಾರ್ಡ್‌ ಅಕಾಡೆಮಿ

ಮಂಗಳೂರು: ದೇಶದ ಮೊದಲ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿಯ ಸ್ಥಾಪನೆ ಪ್ರಕ್ರಿಯೆ ಮಂಗಳೂರಿನಲ್ಲಿ ಆರಂಭಗೊಂಡಿದೆ. ಕೆಂಜಾರಿನಲ್ಲಿ 158 ಎಕ್ರೆ ಭೂಮಿಯನ್ನು ಇದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದ್ದು, ಸುತ್ತಲೂ ಆವರಣ ಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಅಕಾಡೆಮಿ ಸ್ಥಾಪನೆಗೆ ತಾತ್ವಿಕವಾಗಿ ಅನುಮೋದನೆ ಪಡೆದ ಬಳಿಕ ಹಂತ ಹಂತವಾಗಿ ಕೆಲಸ ನಡೆಯುತ್ತಿದ್ದು, 2026ರ ವೇಳೆಗೆ ಪೂರ್ಣ ಪ್ರಮಾಣದ ಅಕಾಡೆಮಿ ತಲೆ ಎತ್ತುವ ನಿರೀಕ್ಷೆ ಇದೆ. ಅಕಾಡೆಮಿ ಸ್ಥಾಪನೆಗೆ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಕರಾವಳಿಯಲ್ಲಿ ಅಕಾಡೆಮಿಗೆ ಪೂರಕವಾದ ಭೌಗೋಳಿಕ ಲಕ್ಷಣಗಳಿದ್ದು, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೌಕಾ ತರಬೇತಿ, ಮಾಲಿನ್ಯ ಸ್ಪಂದನೆ, ಶೋಧ ಮತ್ತು ಪತ್ತೆ, ವಿವಿಧ ರೀತಿಯ ಕಾರ್ಯಾಚರಣೆ, ಸಾಗರೋತ್ತರ ನಿಯಮಾವಳಿಗಳು, ಕಡಲ್ಗಳ್ಳರ ನಿಯಂತ್ರಣ ಇತ್ಯಾದಿ ತರಬೇತಿ ನೀಡಲಾಗುವುದು. ಇದಕ್ಕಾಗಿ ಹಲವು ರೀತಿಯ ನೌಕೆಗಳು, ವಿಮಾನಗಳು ಕೂಡ ಬರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ತರಬೇತಿಗೆ ಅಕಾಡೆಮಿಯೊಳಗೆ 9 ವಿವಿಧ ಸ್ಕೂಲ್‌ಗ‌ಳು ಇರುತ್ತವೆ. ಸುಮಾರು 650ರಷ್ಟು ಪ್ರಶಿಕ್ಷಣಾರ್ಥಿಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಇದರಲ್ಲಿ ವಿದೇಶಿ ವಿದ್ಯಾರ್ಥಿಗಳೂ ಇರುತ್ತಾರೆ ಎನ್ನುವುದು ವಿಶೇಷ.

LEAVE A REPLY

Please enter your comment!
Please enter your name here