ಬಹುಕೋಟಿ ವಂಚಕಿ ಚೈತ್ರಾ ಹೆಸರಿನ ಮುಂದೆ ಕುಂದಾಪುರ ಹೆಸರು ಬಳಸದಂತೆ ಕೋರ್ಟ್ ತಡೆಯಾಜ್ಞೆ-ಚೈತ್ರಾ ತಂಡಕ್ಕೆ ಹತ್ತು ದಿನಗಳ ನ್ಯಾಯಾಂಗ ಬಂಧನ

ಮಂಗಳೂರು: ಬಹುಕೋಟಿ ವಂಚನೆ ಆರೋಪಿ ಚೈತ್ರಾ ಹೆಸರಿನೊಂದಿಗೆ ಕುಂದಾಪುರ ಹೆಸರು ಬಳಸದಂತೆ ಬೆಂಗಳೂರು ನಗರ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಹನುಮಂತ ನಗರದ ನಿವಾಸಿಯಾಗಿರುವ ಗಣೇಶ್‌ ಶೆಟ್ಟಿ ಎಂಬವರು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಕುಂದಾಪುರ ಹೆಸರು ತೆಗೆದು ಹಾಕುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಂಚನೆ ಪ್ರಕರಣದ ಆರೋಪಿಯಾಗಿರುವ ಚೈತ್ರಾ ಸುದ್ದಿ ಪ್ರಚಾರದ ವೇಳೆ ಕುಂದಾಪುರ ಹೆಸರು ಬಳಸುವುದರಿಂದ ಊರಿನ ಹೆಸರಿಗೆ ಕಳಂಕ ತಟ್ಟಲಿದೆ. ಇದರಿಂದ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡಬಹುದಂತಾಗಬಹುದು, ದೇವಾಲಯಗಳ ತವರೂರು, ಪ್ರಕೃತಿ ಸಹಜ ರಮ್ಯತಾಣವಾಗಿರುವ ಕುಂದಾಪುರದ ಹೆಸರು ಆರೋಪಿಯೊಬ್ಬರ ಹೆಸರಿನ ಭಾಗವಾಗಿ ಹಾಳಾಗಬಾರದು ಎಂದು ಗಣೇಶ್‌ ಶೆಟ್ಟಿ ಅರ್ಜಿಯಲ್ಲಿ ಕಳಕಳಿ ವ್ಯಕ್ತಪಡಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಎಲ್ಲರಿಗೂ ಸಮನ್ಸ್‌  ನೀಡಿ ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಕಾಯ್ದಿರಿಸಿದೆ. ಗಣೇಶ್‌ ಶೆಟ್ಟಿ ಪರವಾಗಿ ಹೆಚ್‌ ಪವನ್‌ಚಂದ್ರ ಶೆಟ್ಟಿ ವಾದಿಸಿದ್ದರು.

ವಂಚನೆ ಪ್ರಕರಣದಲ್ಲಿ ಬಂಧಿತರ ಪೊಲೀಸ್‌ ಕಸ್ಟಡಿ ಅವಧಿ ಮುಗಿದಿದ್ದು ಸೆ.23ರಂದು ಎಲ್ಲಾ ಆರೋಪಿಗಳನ್ನು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಧೀಶರು ಎಲ್ಲಾ ಆರೋಪಿಗಳನ್ನು ಮುಂದಿನ 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲಶ್ರೀ ಸ್ವಾಮೀಜಿ ವಿಚಾರಣೆ ಮುಂದುವರಿದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here