ಬಿಜೆಪಿ-ಜೆಡಿಎಸ್‌ ಮೈತ್ರಿ – ಜೆಡಿಎಸ್‌ ನಲ್ಲಿ ರಾಜಿನಾಮೆ ಪರ್ವ-ಜಾತ್ಯತೀತ ನಾಯಕರಿಂದ ಕಾಂಗ್ರೆಸ್‌ ಸೇರಲು ಸಿದ್ಧತೆ

ಮಂಗಳೂರು: ರಾಜ್ಯದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಜತೆಗೆ ಮೈತ್ರಿಮಾಡಿಕೊಂಡಿರುವ ಜೆಡಿಎಸ್‌ನ ವರಿಷ್ಠ ನಾಯಕರ ತೀರ್ಮಾನದಿಂದ ಜಾತ್ಯತೀತ ನಿಲುವಿನ ಕಾರ್ಯಕರ್ತರಲ್ಲಿ ಇರಿಸು ಮುರಿಸು ಉಂಟಾಗಿದ್ದು, ಜಾತ್ಯತೀತ ಭಾವನೆಗೆ ಧಕ್ಕೆಯಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಜೆಡಿಎಸ್ ಪಕ್ಷದ ಮುಸ್ಲಿಂ ಮುಖಂಡರು ಸಾಮೂಹಿಕವಾಗಿ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದು, ಪಕ್ಷದ ಆಯಕಟ್ಟಿನ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯದ ಮುಖಂಡರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ಸೈಯದ್‌ ಶಫಿವುಲ್ಲಾ, ಹೊಸದಿಲ್ಲಿಯಲ್ಲಿನ ವಿಶೇಷ ಪ್ರತಿನಿಧಿ ಮಹಮ್ಮದ್‌ ಅಲ್ತಾಫ್, ಯುವ ಮೋರ್ಚಾ ಅಧ್ಯಕ್ಷ ಎನ್‌.ಎಂ. ನೂರ್‌, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ್‌ ಹುಸೇನ್‌ ಉಸ್ತಾದ್‌, ಮಾಜಿ ಸಚಿವ ಎನ್‌.ಎಂ. ನಬಿ ಸೇರಿ ಹಲವರು ರಾಜೀನಾಮೆಗೆ ಮುಂದಾಗಿದ್ದಾರೆ. ಜೆಡಿಎಸ್‌ ಮೂಲಗಳ ಪ್ರಕಾರ ಸೈಯದ್‌ ಶಫಿವುಲ್ಲಾ ಈಗಾಗಲೇ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಜೆಡಿಎಸ್‌ನ ಜಾತ್ಯತೀತ ನಿಲುವನ್ನು ಒಪ್ಪಿಕೊಂಡ ಕೆಲವು ಹಿಂದೂ ಮುಖಂಡರೂ ರಾಜೀನಾಮೆಗೆ ಮುಂದಾಗಿದ್ದು, ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಜಿಲ್ಲೆಯ ಕಾಂಗ್ರೆಸ್ ಪ್ರಭಾವಿ ನಾಯಕರಾಗಿದ್ದ ಮೊಹಿದ್ದೀನ್ ಬಾವಾ ರವರು ಕೂಡ ಜೆಡಿಎಸ್ ನಿಲುವಿನಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದು, ಕಾಂಗ್ರೆಸ್‌ ಸೇರುವ ಸಾಧ್ಯತೆ ಹೆಚ್ಚಿದೆ.

LEAVE A REPLY

Please enter your comment!
Please enter your name here