ಮಂಗಳೂರು(ಕುಂದಾಪುರ): ಶ್ವಾನದೊಂದಿಗೆ ಮನೆಯಿಂದ ತೆರಳಿದ್ದ ಯುವಕನೋರ್ವ 8 ದಿನಗಳ ಬಳಿಕ ಮನೆಗೆ ವಾಪಾಸ್ ಆಗಿರುವ ಘಟನೆಯೊಂದು ಕುಂದಾಪುರ ಸಮೀಪದ ಅಮಾವಾಸ್ಯೆ ಬೈಲು ಗ್ರಮ ವ್ಯಪ್ತಿಯಲ್ಲಿ ನಡೆದಿದೆ.
ತೊಂಬಟ್ಟು ಇರ್ಕಿಗದ್ದೆ ನಿವಾಸಿ ಸೀನ ನಾಯ್ಕ ಎಂಬವರ ಪುತ್ರ ವಿವೇಕಾನಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಸೆ.16ರಂದು ಮನೆಯಿಂದ ಹೊರಗೆ ಹೋದವನು ತಿರುಗಿ ಬಂದಿರಲಿಲ್ಲ. ವಾರಗಳ ಕಾಲ ಅನ್ನ ಆಹಾರವಿಲ್ಲದೆ ನೀರು ಕುಡಿದು ಕಾಡಿನಲ್ಲಿ ಅಲೆಯುತ್ತಿದ್ದ ಈತನನ್ನು ಹುಡುಕಲು ಅರಣ್ಯ ಇಲಾಖೆ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಶ್ರಮಿಸಿದ್ದರು.
ಈ ಭಾಗದಲ್ಲಿ ಚಿರತೆಗಳ ಹಾವಳಿ ಇರುವುದರಿಂದ ಚಿರತೆಗೆ ಆಹಾರವಾಗಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆಶ್ಚರ್ಯ ಎನ್ನುವಂತೆ 7 ದಿನಗಳ ಬಳಿಕ ವಿವೇಕಾನಂದ ಕಬ್ಬಿನಾಲೆಯ ಸಮೀಪ ಮನೆಯೊಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಬ್ಬಿನಾಲೆಯ ಮನೆಯವರು ಅನ್ನ ಆಹಾರ ನೀಡಿ ವಿವೇಕಾನಂದನನ್ನು ಉಪಚರಿಸಿ ಮನೆಮಂದಿಗೆ ಮಾಹಿತಿ ತಲುಪಿಸಿದ್ದಾರೆ. ಸದ್ಯ ವಿವೇಕಾನಂದನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ತಿಳಿದೋ ತಿಳಿಯದೆಯೋ ಕಾಡು ಸೇರಿದ್ದ ವಿವೇಕಾನಂದ ಮತ್ತೆ ಮನೆಗೆ ಬರುವಲ್ಲಿ ಜತೆಗಿದ್ದ ಸಾಕುನಾಯಿ ಸಹಾಯ ಮಾಡಿದೆ.