ಮಂಗಳೂರು(ಬೆಂಗಳೂರು): ರಾಜ್ಯದಾದ್ಯಂತ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅ.1ರಿಂದ ಜಾರಿಯಾಗಿದೆ. ಸರ್ಕಾರಿ ರಜಾ ದಿನಗಳು ಇರುವ ಕಾರಣ ಅ.3ರಿಂದ ಹೊಸ ದರಗಳ ಅನುಸಾರ ಸ್ಥಿರಾಸ್ತಿಗಳ ಮಾರಾಟ, ಖರೀದಿ, ಗುತ್ತಿಗೆ ಸೇರಿದಂತೆ ವಿವಿಧ ಬಗೆಯ ದಸ್ತಾವೇಜುಗಳ ನೋಂದಣಿ ಆರಂಭವಾಗಲಿದೆ.
ಐದು ವರ್ಷಗಳ ಬಳಿಕ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಜಿಲ್ಲಾವಾರು ಪರಿಷ್ಕೃತ ದರಗಳ ಕರಡು ಪಟ್ಟಿಗಳನ್ನು ಪ್ರಕಟಿಸಲಾಗಿತ್ತು. ಹೊಸ ದರಗಳ ಪ್ರಕಾರ ದಸ್ತಾವೇಜುಗಳ ನೋಂದಣಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಿದ್ಧತೆ ಪೂರ್ಣಗೊಳಿಸಿದೆ. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಆನೇಕಲ್ ಸೇರಿದಂತೆ ಬೆಂಗಳೂರಿನ ಹೊರ ವಲಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಕೋಲಾರ ಸೇರಿದಂತೆ ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಎಲ್ಲ ನಗರ ಸ್ಥಳೀಯಸಂಸ್ಥೆಗಳಲ್ಲೂ ಅನುಮೋದಿತ ಬಡಾವಣೆಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಅನುಮೋದಿತ ನಿವೇಶನಗಳ ಮಾರ್ಗಸೂಚಿ ದರದಲ್ಲೂ ಏರಿಕೆ ಮಾಡಲಾಗಿದೆ. ಕೃಷಿ, ಕೃಷಿಯೇತರ ಜಮೀನುಗಳ ಮಾರ್ಗಸೂಚಿ ದರಗಳಲ್ಲೂ ಭಾರಿ ಬದಲಾವಣೆ ಆಗಿದೆ. ಮಾರ್ಗಸೂಚಿ ದರಗಳಲ್ಲಿ ಸರಾಸರಿ ಶೇಕಡ 30ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಬೆಂಗಳೂರು ಹೊರ ವಲಯವೂ ಸೇರಿದಂತೆ ಹಲವು ಕಡೆಗಳಲ್ಲಿ ಮಾರ್ಗಸೂಚಿ ದರದ ಏರಿಕೆಯು ಶೇ 70ಕ್ಕಿಂತಲೂ ಜಾಸ್ತಿ ಇದೆ. ಸ್ಥಿರಾಸ್ತಿ ಖರೀದಿ ಮತ್ತು ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಪ್ರದೇಶಗಳಲ್ಲೇ ದರ ಏರಿಕೆಯ ಪ್ರಮಾಣ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.