ಮಂಗಳೂರು(ಉಳ್ಳಾಲ): ಗಣಿತ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದಿದ್ದ ಆರನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಸಹಪಾಠಿಯೊಂದಿಗೆ ಸೇರಿ ಪೇಪರ್ ತಿದ್ದಿದ್ದ ಶಿಕ್ಷಕಿಯ ನೀರಿನ ಬಾಟಲಿಗೆ ಅವಧಿ ಮೀರಿದ್ದ ಮಾತ್ರೆಗಳನ್ನ ಹಾಕಿ ಸೇಡು ತೀರಿಸಿದ್ದರ ಪರಿಣಾಮ ನೀರನ್ನು ಕುಡಿದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಉಳ್ಳಾಲ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಘಟನೆಗೆ ಕಾರಣರಾದ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ಶಾಲಾಡಳಿತ ಮಂಡಳಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಶಾಲಾ ಯುನಿಟ್ ಟೆಸ್ಟ್ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಪೇಪರ್ ತಿದ್ದಿದ್ದ ಗಣಿತ ಶಿಕ್ಷಕಿ ಸರಿಯಿದ್ದ ಉತ್ತರಕ್ಕೆ ತಪ್ಪು ಹಾಕಿದ್ದಾರೆ ಅನ್ನುವ ಬಾವನೆ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು. ಶಿಕ್ಷಕಿಯ ವಿರುದ್ಧ ಸೇಡು ತೀರಿಸಲು ತನ್ನ ಸಹಪಾಠಿಯ ಸಹಾಯ ಪಡೆದುಕೊಂಡ ವಿದ್ಯಾರ್ಥಿನಿ ಸ್ಟಾಫ್ ರೂಮ್ನಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡು ತಾನು ತಂದಿದ್ದ ಅವಧಿ ಮೀರಿದ್ದ ಮಾತ್ರೆಗಳನ್ನ ಗಣಿತ ಶಿಕ್ಷಕಿ ಬಳಸುತ್ತಿದ್ದ ನೀರಿನ ಬಾಟಲಿಗೆ ಹಾಕಿದ್ದಾಳೆ. ಗಣಿತ ಶಿಕ್ಷಕಿಯು ಬಾಟಲಿ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದು,ಅದೇ ನೀರನ್ನ ಸೇವಿಸಿದ್ದ ಮತ್ತೋರ್ವ ಶಿಕ್ಷಕಿಯ ಮುಖ ಊದಿ ಕೊಂಡಿದೆ. ಅನುಮಾನಗೊಂಡ ಶಿಕ್ಷಕರು ನೀರಿನ ಬಾಟಲಿಯನ್ನ ಪರಿಶೀಲಿಸಿದಾಗ ನೀರಿನಲ್ಲಿ ಮಾತ್ರೆಗಳು ಕರಗಿರುವುದನ್ನ ಗಮನಿಸಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ವಿದ್ಯಾರ್ಥಿನಿಯರ ಕುಕೃತ್ಯ ಬೆಳಕಿಗೆ ಬಂದಿದೆ.