ಜೆಡಿಎಸ್‌ ಜೊತೆ ಮೈತ್ರಿ ರಾಜ್ಯ ಬಿಜೆಪಿ ನಾಯಕರ ಜೊತೆ ವರಿಷ್ಠರು ಚರ್ಚಿಸಿಲ್ಲ – ಸದಾನಂದಗೌಡ

ಮಂಗಳೂರು(ಬೆಂಗಳೂರು): ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮ್ಮ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟೇ ಅವರು ತೀರ್ಮಾನ ಮಾಡಿದ್ದಾರೆ ಎಂದು ಸಂಸದ ಡಿ ವಿ ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅ.6ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಹೊರಗಿಟ್ಟೇ ವರಿಷ್ಠರು ತೀರ್ಮಾನ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಎನ್.ಡಿ.ಎ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಚಾರದ ಬಗ್ಗೆ ತೀರ್ಮಾನ ಮಾಡುವಾಗ ನಮ್ಮನ ಹೊರಗಿಡುತ್ತಾರೆ. ಇದು ಕರ್ನಾಟಕಕ್ಕೆ ಸೀಮಿತ ಆಗಿಲ್ಲ, ಬೇರೆ ಬೇರೆ ರಾಜ್ಯಗಳಲ್ಲಿ ಮತ ಕ್ರೂಡೀಕರಣ ಆಗಬೇಕಿದೆ‌. ಹಾಗಾಗಿ ಉನ್ನತ ಮಟ್ಟದಲ್ಲಿ ಚರ್ಚೆಯಾಗಲಿದೆ. ಅವರು ತೆಗೆದುಕೊಂಡ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಆಯ್ಕೆಗೆ ಪಕ್ಷದ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿ ವಿ ಸದಾನಂದಗೌಡ, ನಿಜಕ್ಕೂ ಇಷ್ಟು ವಿಳಂಬ ಆಗಿರೋದು ನೋವಿನ ಸಂಗತಿ ಎಂದು ತಿಳಿಸಿದರು.ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಆಯ್ಕೆ ವಿಳಂಬ ಆಗಿರೋದು ಹೌದು, ಇದು ನಮಗೆಲ್ಲ ಅತ್ಯಂತ ನೋವು ತಂದಿದೆ. ನಾನು ನಮ್ಮ ವರಿಷ್ಠರ ಬಳಿ ಮನವಿ ಮಾಡುತ್ತೇನೆ. ಇವಾಗಲಾದ್ರೂ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಬೇಗ ಮಾಡಿ, ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ವರಿಷ್ಠರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here