ಮಂಗಳೂರು: ಮೀನುಗಾರರಿಗಾಗಿ ಬಿಜೆಪಿ ಸರ್ಕಾರದ ಅವಧಿಯ 2023 ರ ಫೆಬ್ರುವರಿ ಬಜೆಟ್ ನಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿತ್ತು. ಅವು ಜಾರಿಯಾಗುವ ಹಂತದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ 2023ರ ಜುಲೈನಲ್ಲಿ ಹೊಸ ಬಜೆಟ್ ಘೋಷಿಸಿತ್ತು.
ಆದರೆ ನಮ್ಮ ಸರ್ಕಾರ ಘೋಷಿಸಿದ್ದ ಬಹುತೇಕ ಎಲ್ಲಾ ವಿಶೇಷ ಯೋಜನೆಗಳನ್ನು ಕಡೆಗಣಿಸುವ ಮೂಲಕ ಮೀನುಗಾರರ ಬದುಕಿಗೆ ಹೊಡೆತ ನೀಡಿದ್ದಲ್ಲದೇ, ಇತ್ತೀಚೆಗೆ ಕಾಂಗ್ರೆಸ್ಸಿಗರು ತಮ್ಮ ಸರ್ಕಾರವು 100 ದಿನ ಪೂರೈಸುವಷ್ಟರಲ್ಲಿ ಮೀನುಗಾರರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಈಡೇರಿಸಿರುವುದಾಗಿ ಹೇಳುತ್ತಿದೆ ಎಂದು ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.ವಾಸ್ತವದಲ್ಲಿ ಕಾಂಗ್ರೆಸ್ ಸರ್ಕಾರ ಮೀನುಗಾರರ ಭರವಸೆ ಈಡೇರಿಸಿಲ್ಲ, ಬದಲಿಗೆ ಕಡೆಗಣಿಸಿದೆ. ಕಾಂಗ್ರೆಸ್ ಪಕ್ಷದ ರಾಷ್ಟೀಯ ನಾಯಕ ರಾಹುಲ್ ಗಾಂಧಿಯವರು ಚುನಾವಣಾ ಸಂದರ್ಭ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ ಶಂಕರ್ ಸಭಾಂಗಣದಲ್ಲಿ ಮೀನುಗಾರರೊಂದಿಗೆ ನಡೆಸಿದ ಸಂವಾದದಲ್ಲಿ ನೀಡಿದ್ದ ಸುಳ್ಳಿನ ಭರಪೂರ ಆಶ್ವಾಸನೆಗಳಲ್ಲಿ ಯಾವ ಭರವಸೆ ಈಡೇರಿದೆ ಎಂಬುದನ್ನು ಕಾಂಗ್ರೆಸ್ ತಿಳಿಸಬೇಕು ಎಂದು ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.