ಉದ್ಯಮಿ ಮುಂಡ್ಕೂರು ರಾಮದಾಸ್‌ ಕಾಮತ್‌ ಅಸಹಜ ಸಾವು ಪ್ರಕರಣ-ತನಿಖೆಗೆ ಹೆಚ್ಚಿದ ಒತ್ತಾಯ-ಎಸಿಪಿಐ ನೇತೃತ್ವದಲ್ಲಿ ತನಿಖೆ-ಕಮೀಷನರ್‌ ಅನುಪಮ್‌ ಅಗರ್ವಾಲ್‌

ಮಂಗಳೂರು: ಮಂಗಳೂರಿನ ಹೆಸರಾಂತ ಉದ್ಯಮಿ ಮುಂಡ್ಕೂರು ರಾಮದಾಸ್‌ ಕಾಮತ್‌ ಅಸಹಜ ಸಾವಿನ ವಿಚಾರ ಸುಮಾರು ಒಂದು ತಿಂಗಳ ಬಳಿಕ ಮತ್ತೆ ಮುನ್ನಲೆಗೆ ಬಂದಿದೆ. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ನಿಜಾಂಶವನ್ನು ಬಯಲಿಗೆಳೆಯಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿ ಉದ್ಯಮಿ ಬಿ.ಆರ್‌.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಮೂಲಕ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಪತ್ರ ಬರೆದಿದ್ದಾರೆ.

ಎಂ.ಆರ್‌. ಕಾಮತ್‌ (75) ಕಳೆದ ಮೂರು ತಿಂಗಳಿನಿಂದ ಯಾರ ಜೊತೆಗೆಲ್ಲ ಸಂಪರ್ಕದಲ್ಲಿದ್ದರೋ ಅವರನ್ನೆಲ್ಲ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬಿ.ಆರ್‌.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಕಾಮತ್‌ ಜ್ಯೂರಿಸ್‌ ಮೂಲಕ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಬರೆದ ಪತ್ರದ ಪ್ರತಿ ಮಾದ್ಯಮಗಳಿಗೆ ಲಭ್ಯವಾಗಿದೆ. ಪತ್ರ ತಲುಪಿರುವುದನ್ನು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಖಚಿತಪಡಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರಿಗೂ ಅವರು ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ. ‘ಎಂ.ಆರ್‌. ಕಾಮತ್ ಅವರು ನಮ್ಮ ಕಕ್ಷಿದಾರರಿಗೆ 50 ವರ್ಷಗಳಿಂದ ಪರಿಚಿತರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೃಢ ಇಚ್ಛಾಶಕ್ತಿ ಹಾಗೂ ಶಿಸ್ತಿನ ಮನುಷ್ಯರಾಗಿದ್ದ ಅವರ ಸಾವಿನ ಬಗ್ಗೆ ಅನುಮಾನಗಳಿವೆ. ಸಾರ್ವಜನಿಕ ವಲಯದಲ್ಲೂ ಅವರ ಸಾವಿನ ಬಗ್ಗೆ ಅನೇಕ ವದಂತಿ ಹಬ್ಬಿವೆ. ಹಾಗಾಗಿ ಕೂಲಂಕಷ ತನಿಖೆ ನಡೆಸಿ ಸತ್ಯಾಂಶ ಏನೆಂಬುದನ್ನು ಹೊರಗೆಡವಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ‘ಅವರು ಮೃತಪಟ್ಟು ಈಗಾಗಲೇ ಅನೇಕ ದಿನಗಳು ಕಳೆದಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದೂ ಪತ್ರದಲ್ಲಿ ದೂರಲಾಗಿದೆ.

ಇನ್ನೂ ಉದ್ಯಮಿ ಮುಂಡ್ಕೂರು ರಾಮದಾಸ್‌ ಕಾಮತ್‌ (75) ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಎಸಿಪಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ. ಸೆ. 17ರಂದು ರಥಬೀದಿಯ ಫ್ಲ್ಯಾಟ್‌ನಲ್ಲಿ ರಾಮದಾಸ್‌ ಕಾಮತ್‌ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಘಟನೆಯ ಮೂರು ದಿನಗಳ ಅನಂತರ ಆತ್ಮಹತ್ಯೆಯ ಕಾರಣದ ಕುರಿತಾಗಿ ಅನುಮಾನ ವ್ಯಕ್ತಪಡಿಸಿ ಮಾಹಿತಿಗಳು ಬಂದವು. ಈ ಹಿನ್ನೆಲೆಯಲ್ಲಿ ಕೂಡಲೇ ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಕಾಮತ್‌ ಅವರ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಯಾವುದೇ ಸಂದೇಹ ವ್ಯಕ್ತಪಡಿಸಿ ದೂರು ನೀಡಿಲ್ಲ. ಆದಾಗ್ಯೂ ಯಾವುದೇ ಅನುಮಾನಗಳಿಗೆ ಆಸ್ಪದವಾಗಬಾರದೆಂಬ ಉದ್ದೇಶದಿಂದ ಎಸಿಪಿ ನೇತೃತ್ವದಲ್ಲಿಯೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮದಾಸ್‌ ಕಾಮತ್‌ ಅವರು ಪತ್ನಿಯನ್ನು ಮುಂಡ್ಕೂರಿಗೆ ಬಿಟ್ಟು ಬಂದಿದ್ದರು. ಮರುದಿನ ತಾನು ಕೂಡ ಮುಂಡ್ಕೂರಿಗೆ ಬರುವುದಾಗಿ ಹೇಳಿದ್ದರು. ಆದರೆ ಹೋಗಿರಲಿಲ್ಲ. ಪತ್ನಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಆಗ ಪತ್ನಿ ಮಂಗಳೂರಿನಲ್ಲಿರುವ ತನ್ನ ತಂಗಿಯ ಮಕ್ಕಳಿಗೆ ತಿಳಿಸಿದರು. ಅವರು ಬಂದು ನೋಡಿದಾಗ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here