ವಕೀಲೆಗೆ ನಿಂದನೆ, ಮಾನಸಿಕ ಕಿರುಕುಳದ ಆರೋಪ – ಬಸ್ ಚಾಲಕ-ಕಂಡೆಕ್ಟರ್ ವಿರುದ್ಧ ದೂರು ದಾಖಲು

ಮಂಗಳೂರು: ನಗರದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ವಕೀಲೆಯೊಬ್ಬರಿಗೆ ಕಂಡೆಕ್ಟರ್ ಇತರ ಪ್ರಯಾಣಿಕರ ಸಮ್ಮುಖ ನಿಂದಿಸಿ ಮಾನಸಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಬಸ್ ಚಾಲಕ ಮತ್ತು ಕಂಡೆಕ್ಟರ್ ವಿರುದ್ಧ ಕದ್ರಿ ಠಾಣೆಯಲ್ಲಿ ಅ.9ರಂದು ಪ್ರಕರಣ ದಾಖಲಾಗಿದೆ.

ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ಕೆ.ಮುಫೀದಾ ರಹ್ಮಾನ್ ಅವರು ವೃತ್ತಿಯಲ್ಲಿ ವಕೀಲೆಯಾ ಗಿದ್ದು, ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮುಫೀದಾ ರಹ್ಮಾನ್ ಅವರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬ್ರ 19ರ ‘ಆ್ಯಶೆಲ್’ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ‘ತಾನು ಬಸ್ಸಿಗೆ ಹತ್ತುವಾಗ ಚಾಲಕನು ದುಡುಕಿನಿಂದ ಮುಂದಕ್ಕೆ ಚಲಾಯಿಸಿದ. ಈ ವೇಳೆ ಕೆಳಗೆ ಬೀಳುವಂತಾಗಿ ಬೊಬ್ಬೆ ಹಾಕಿದೆ. ಆದರೂ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ. ಈ ವೇಳೆ ಬಸ್ ಕಂಡೆಕ್ಟರ್ ನನ್ನ ಕೈ ಹಿಡಿದೆಳೆದು ನಿಮಗೆ ಬೇಗ ಬಸ್ಸಿಗೆ ಹತ್ತಲು ಆಗುವುದಿಲ್ಲವಾ? ಬಿದ್ದು ಸಾಯುತ್ತೀಯಾ? ಎಂದು ಬೈದಿದ್ದಾನೆ. ಇದಕ್ಕೆ ನಾನು ಪ್ರತಿರೋಧ ತೋರಿದಾಗ ‘ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ. ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು. ಇಲ್ಲದಿದ್ದರೆ ಇಳಿಯಬೇಕು’ ಎಂದು ತಾನು ಬಸ್ಸಿನಿಂದ ಇಳಿಯುವವರೆಗೆ ನನಗೆ ಅವಾಚ್ಯ ಶಬ್ದದಿಂದ ಬೈದು ಸಾರ್ವಜನಿಕರ ಮುಂದೆ ಮಾನಹಾನಿಗೊಳಿಸಿದ್ದಾನೆ. ತಾನು ಆತನ ಫೋಟೋವನ್ನು ಮೊಬೈಲ್‌ನಲ್ಲಿ ತೆಗೆಯುವಾಗ ನಿನಗೆ ಏನು ಮಾಡಲು ಸಾಧ್ಯವಿದೆ. ಅದನ್ನು ಮಾಡು ಎಂದಿದ್ದಾನೆ. ಹಾಗಾಗಿ ಬಸ್ಸನ್ನು ಹತ್ತುವಾಗ ಕೆಳಗೆ ಬೀಳುವಂತಾದರೂ ನಿಲ್ಲಿಸದ ಚಾಲಕನ ಹಾಗೂ ಬಸ್ಸಿನಲ್ಲಿ ಉಡಾಫೆಯಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿದ ಕಂಡೆಕ್ಟರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ವಕೀಲೆ ಮುಫೀದಾ ರಹ್ಮಾನ್ ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ‘ಘಟನೆಯ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here