ಮಂಗಳೂರು(ಕೊಚ್ಚಿ): ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದ ಕೇರಳ ಮೂಲದ ನರ್ಸ್ ಭಾರತಲ್ಲಿರುವ ತನ್ನ ಪತಿಯೊಂದಿಗೆ ವಿಡಿಯೊ ಕರೆ ಮಾಡಿ ಮಾತನಾಡುವ ವೇಳೆ ನಡೆದ ಹಮಾಸ್ ದಾಳಿಯಲ್ಲಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಳೆದ ಏಳು ವರ್ಷಗಳಿಂದ ಇಸ್ರೇಲ್ ನಲ್ಲಿರುವ ಶೀಜಾ ಆನಂದ (41) ಭಾರತದಲ್ಲಿರುವ ತನ್ನ ಕುಟುಂಬಕ್ಕೆ ಕರೆ ಮಾಡಿ ತಾನು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದರು. ಇದೇ ವೇಳೆ ಫೆಲೆಸ್ತೀನ್ ನ ಬಂಡುಕೋರರ ಗುಂಪು ಇಸ್ರೇಲ್ ಮೇಲೆ ದಿಢೀರ್ ದಾಳಿ ನಡೆಸಿತ್ತು. ನಂತರ ಅವರು ಪತಿಗೆ ಮತ್ತೊಮ್ಮೆ ಕರೆ ಮಾಡಿದ್ದು ಭೀಕರ ಶಬ್ದದೊಂದಿಗೆ ಸಂಪರ್ಕ ಏಕಾಏಕಿ ಕಡಿತಗೊಂಡಿತ್ತು. ಬಳಿಕ ಇಸ್ರೇಲ್ ನಲ್ಲಿರುವ ಕೇರಳೀಯರೋರ್ವರು ಆನಂದ ಕುಟುಂಬಕ್ಕೆ ಕರೆ ಮಾಡಿ, ಶೀಜಾ ಗಾಯಗೊಂಡಿದ್ದು ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂದು ತಿಳಿಸಿದ್ದರು. ಮತ್ತೊಂದು ಶಸ್ತ್ರಚಿಕಿತ್ಸೆಗಾಗಿ ಅವರನ್ನು ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಿದ್ದಾರೆ ಎಂದೂ ಹೇಳಿದ್ದರು. ಶೀಜಾರ ಪತಿ ಮತ್ತು ಇಬ್ಬರು ಮಕ್ಕಳು ಭಾರತದಲ್ಲಿದ್ದು, ಪತಿ ಪುಣೆಯಲ್ಲಿ ಉದ್ಯೋಗದಲ್ಲಿದ್ದಾರೆ.
ಈ ನಡುವೆ ಕೇರಳದ 200ಕ್ಕೂ ಅಧಿಕ ಜನರು ಬೆತ್ಲೆಹೆಮ್ ನ ಹೋಟೆಲ್ಲೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಸುರಕ್ಷಿತರಾಗಿದ್ದಾರೆ. ತಾವು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ವಾಯು ದಾಳಿ ಸೈರನ್ ಶಬ್ದ ಕೇಳಿ ಬಂದಿತ್ತು ಎಂದು ಅವರ ಪೈಕಿ ಜಾಯ್ ಎನ್ನುವವರು ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ. ಬೆತ್ಲೆಹೆಮ್ ನ ಹೋಟೆಲಿನಲ್ಲಿಯೇ ಉಳಿದುಕೊಳ್ಳುವಂತೆ ಈ ಗುಂಪಿಗೆ ಸೂಚಿಸಲಾಗಿದೆ. ಪೂರ್ವ ನಿಗದಿತ ಕಾರ್ಯಕ್ರಮದಂತೆ ಈ ಗುಂಪು ಸೋಮವಾರ ಈಜಿಪ್ಟ್ ಗೆ ತೆರಳಬೇಕಿತ್ತು. ಕೊಚ್ಚಿಯ 45 ನಿವಾಸಿಗಳ ಇನ್ನೊಂದು ಗುಂಪು ಫೆಲೆಸ್ತೀನ್ ನ ಹೋಟೆಲ್ಲೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಸುರಕ್ಷಿತವಾಗಿದೆ ಮತ್ತು ಗಡಿಯನ್ನು ದಾಟಲು ಅನುಮತಿಯನ್ನು ಪಡೆದುಕೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.