ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ-ಶಾಸಕ ಹರೀಶ್ ಪೂಂಜಾ ಹೇಳಿಕೆಯನ್ನು ಖಂಡಿಸಿದ ವಲಯ ಅರಣ್ಯಾಧಿಕಾರಿಗಳ ಸಂಘ-ಹೋರಾಟದ ಎಚ್ಚರಿಕೆ

ಮಂಗಳೂರು(ಬೆಳ್ತಂಗಡಿ): ಕಳೆಂಜ ಅಮ್ಮಿನಡ್ಕದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ಮನೆಯ ಫೌಂಡೇಷನ್ ಕಿತ್ತೆಸೆದ ಪ್ರಕರಣದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರನ್ನು ಶಾಸಕ ಹರೀಶ್ ಪೂಂಜಾ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಬೆಂಗಳೂರು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘ  ಖಂಡಿಸಿದೆ.

ಕಳೆಂಜ ಅಮ್ಮಿನಡ್ಕದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ಮನೆಯ ಫೌಂಡೇಷನ್ ನನ್ನು ಅರಣ್ಯಾಧಿಕಾರಿಗಳು ಕಿತ್ತೆಸೆದಿದ್ದು ಮತ್ತೆ ಅದೇ ಜಾಗದಲ್ಲಿ ಮನೆ ಮರು ನಿರ್ಮಾಣಕ್ಕೆ ಮುಂದಾದಾಗ ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡ ಮತ್ತೆ ತೆರವಿಗೆ ಮುಂದಾಗಿತ್ತು. ಈ ಸಂದರ್ಭ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿರುವುದನ್ನು ಬೆಂಗಳೂರು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿ ಸಂಘ ಖಂಡಿಸಿದೆ.

ಮಂಗಳೂರು ವಿಭಾಗದ ಉಪ್ಪಿನಂಗಡಿ ವಲಯದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ನಿಡ್ಲೆ ವಿಸ್ತೃತ ಬ್ಲಾಕ್-2 ಮೀಸಲು ಅರಣ್ಯ ಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಹಾಗೂ ಸಿಬ್ಬಂದಿಯವರು ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಅವರಿಗೆ ಅವಾಚ್ಯ ಶಬ್ದ ಪ್ರಯೋಗಿಸಿ ನಿಂದಿಸಿರುವುದು ಖಂಡನೀಯ. ಆ ಅವಾಚ್ಯ ಪದ ಬಳಸಿದ ಬಗ್ಗೆ ಕನಿಷ್ಠ ಸೌಜನ್ಯಕ್ಕಾದರೂ ಕ್ಷಮೆ ಕೇಳದೇ ಇರುವುದು ಶಾಸಕರಿಗೆ ಶೋಭೆ ತರುವಂತದಲ್ಲ. ಈ ಕೃತ್ಯವನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿ ಸಂಘ ಕಠಿಣ ಶಬ್ದಗಳಲ್ಲಿ ಖಂಡಿಸುತ್ತದೆ. ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ, ಜನಪ್ರತಿನಿಧಿಗಳಾಗಲೀ ಈ ನೆಲದ ಕಾನೂನನ್ನು ಪಾಲಿಸಬೇಕಾಗುತ್ತದೆ. ಕಾನೂನಿಗಿಂತ ಯಾರು ಮಿಗಿಲಾಗಿರುವುದಿಲ್ಲ. ಒಂದು ವೇಳೆ ವಲಯ ಅರಣ್ಯಾಧಿಕಾರಿಗಳು ಏನೇ ಕರ್ತವ್ಯ ಚ್ಯುತಿ ಮಾಡಿದ್ದರೂ ಅದನ್ನು ಕಾನೂನಿನ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳ ಬೇಕಾಗಿರುವುದು ಶಾಸಕರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಗೌರವಾನ್ವಿತ ಶಾಸಕರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಗೆ ತನ್ನ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿ ಅವಾಚ್ಯ ಪದ ಬಳಸಿ ನಿಂದಿಸಿರುವುದು ಅವರ ಘನತೆಗೆ ತಕ್ಕದ್ದಾಗಿರುವುದಿಲ್ಲ. ಈ ಘಟನೆಯನ್ನು ಸಂಘವು ಖಂಡಿಸುತ್ತಾ ಅರಣ್ಯ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಯವರಿಗೆ ಕಾನೂನಿನ ಅನ್ವಯ ಸಾರ್ವಜನಿಕ ಕೆಲಸ ನಿರ್ವಹಿಸಲು ನೈತಿಕ ಸ್ಥೈರ್ಯವನ್ನು ಸಂಘ ನೀಡುತ್ತದೆ. ಮುಂದೆ ಇಂತಹ ಘಟನೆ ಮರುಕಳಿಸಿದಲ್ಲಿ ಹೋರಾಟಕ್ಕೂ ಸಂಘ ಸಿದ್ಧವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

 

LEAVE A REPLY

Please enter your comment!
Please enter your name here