



ಮಂಗಳೂರು(ಕಾರ್ಕಳ): ಬೈಲೂರಿನ ಉಮಿಕಲ್ ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಲಾದ ಕಂಚಿನದ್ದೆಂದು ಹೇಳಲಾದ ಪರಶುರಾಮನ ವಿಗ್ರಹ ನಿನ್ನೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮೂರ್ತಿಯ ಸುತ್ತ ಈಗ ದಪ್ಪದ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದೆ. ಇದರಿಂದ ಯಾರಿಗೂ ಮೂರ್ತಿಯ ಇರುವು ಗೊತ್ತಾಗುತ್ತಿಲ್ಲ. ಅಲ್ಲದೇ ನಿಷೇಧವಿರುವುದರಿಂದ ಬೆಟ್ಟವನ್ನು ಪ್ರವೇಶಿಸಲು ಯಾರಿಗೂ ಅವಕಾಶವನ್ನೂ ನೀಡಲಾಗುತ್ತಿಲ್ಲ.







ಈ ನಡುವೆ ಡ್ರೋನ್ ಕ್ಯಾಮರಾ ಬಳಸಿ ಹೊದಿಕೆಯೊಳಗೇನಿದೆ ಎಂಬುದನ್ನು ಪರಿಶೀಲಿಸಲಾಗಿದ್ದು, ಇದರಿಂದ ನಕಲಿ ಮೂರ್ತಿಯ ಅಸಲಿ ರೂಪ ಬಯಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ಹಿಂದಿದ್ದ ಪರಶುರಾಮನ ಮೂರ್ತಿಯ ಪಾದ, ಕಾಲು ಬಿಟ್ಟು ಉಳಿದ ಭಾಗ ಕಾಣೆಯಾಗಿರುವುದು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ನಡುವೆ ಪೊಲೀಸರ ಬಿಗಿ ಬಂದೊಬಸ್ತ್ ನಡುವೇ ಪರಶುರಾಮ ಮೂರ್ತಿ ಮಾಯವಾಗಿದೆ. ಇದನ್ನು ಹುಡುಕಿಕೊಡುವಂತೆ, ಈ ಹಿಂದೆ ಪ್ರತಿಭಟನೆ ನಡೆಸಿದ್ದ ಸಮಾನಮನಸ್ಕ ಹೋರಾಟಗಾರರ ತಂಡದ ದಿವ್ಯಾನಾಯಕ್ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈಗಾಗಲೇ ಸ್ಥಾಪಿತವಾದ ವಿಗ್ರಹ ಸಂಪೂರ್ಣ ನಕಲಿ ಎಂಬುದು ಕ್ಷೇತ್ರದ ಜನತೆಗೆ ಮನದಟ್ಟಾಗಿದೆ. ಅದ್ದರಿಂದ ಕೂಡಲೇ ಅಸಲಿ ವಿಗ್ರಹವನ್ನು ಸ್ಥಾಪನೆ ಮಾಡಬೇಕು ಮತ್ತು ಶಾಸಕರು ಕಾರ್ಕಳ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.















