ಮಂಗಳೂರು(ಬೆಂಗಳೂರು): ರಾಜ್ಯಕ್ಕೆ ದಿಢೀರ್ ಭೇಟಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಇಂದು ಬೆಳಿಗ್ಗೆ ಚರ್ಚೆ ನಡೆಸಿದ್ದಾರೆ.
ತಡರಾತ್ರಿ ಬೆಂಗಳೂರಿಗೆ ಬಂದಿರುವ ವೇಣುಗೋಪಾಲ್ ಇಂದು ಬೆಳಗ್ಗಿನ ಉಪಾಹಾರಕ್ಕೆ ಎಐಸಿಸಿ ಅಧ್ಯಕ್ಷರ ಮನೆಗೆ ತೆರಳಿದ್ದು, ಅಲ್ಲಿಗೆ ಡಿ.ಕೆ. ಶಿವಕುಮಾರ್ ಕೂಡ ಬಂದಿದ್ದಾರೆ. ಮೂವರೂ ಕೆಲಹೊತ್ತು ರಹಸ್ಯವಾಗಿ ಮಾತುಕತೆ ನಡೆಸಿದ್ದು ತ್ರಿಮೂರ್ತಿಗಳ ಈ ಸಭೆ ಕುತೂಹಲ ಮೂಡಿಸಿದೆ. ಮೂವರು ನಾಯಕರು ರಾಜ್ಯ ರಾಜಕೀಯ ಬೆಳವಣಿಗೆ, ಐಟಿ ದಾಳಿ, ವಿರೋಧ ಪಕ್ಷಗಳ ಕಮಿಷನ್ ಆರೋಪ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಯಾರ್ಯಾರಿಗೆ ಏನೇನು ಉತ್ತರ ಕೊಡಬೇಕೋ ಖಂಡಿತ ಕೊಡ್ತೇನೆ. ಹೈ ವೋಲ್ಟೇಜ್ಗೂ ಕೊಡ್ತೀನಿ, ಲೋ ವೋಲ್ಟೇಜ್ಗೂ ಕೊಡ್ತೀನಿ. ನಕಲಿಗಳಿಗೂ ಕೊಡ್ತೀನಿ, ಲೂಟಿಗಳಿಗೂ ಕೊಡ್ತೀನಿ, ಎಲ್ಲರಿಗೂ ಕೊಡ್ತೀನಿ. ಸ್ವಲ್ಪ ಕಾಯಿರಿ’ ಎಂದು ಹೇಳಿದ್ದಾರೆ. ಬಿಜೆಪಿಯವರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವರು ಪ್ರತಿಭಟನೆ ಮಾಡಲಿ. ಅವರು ಪ್ರತಿಭಟನೆ ಮಾಡಬೇಕು, ಪ್ರತಿಭಟನೆ ಮಾಡಿದರೆ ಅವರ ಲೂಟಿ ಜನರಿಗೆ ತಿಳಿಯುವುದು. ಎಲ್ಲಾ ಬಿಚ್ಚಿಡ್ತೀವಿ’ ಎಂದು ವೇಣುಗೋಪಾಲ್ ಜೊತೆ ತೆರಳಿದರು.