ಮಂಗಳೂರು/ಪುತ್ತೂರು: ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಮೀಸಲಾಗಿದೆ. ಸಾತ್ವಿಕ ಮತ್ತು ಸುಂದರ ರೂಪ ಹೊಂದಿರುವ ತಾಯಿ ಬ್ರಹ್ಮಚಾರಿಣಿ ಪೂರ್ಣಜ್ಯೋತಿರ್ಮಯ ಸ್ವರೂಪಿಯಾಗಿದ್ದು ಬಲಗೈಯಲ್ಲಿ ಜಪಮಾಲೆ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಭಕ್ತರ ಬದುಕಿನಲ್ಲಿ ಶಾಂತಿ ಸ್ಥಾಪನೆ ಮಾಡುತ್ತಾಳೆ ಎಂಬ ನಂಬಿಕೆ. ಶಾಂತಿ ಮತ್ತು ಬ್ರಹ್ಮಚರ್ಯದ ಬಣ್ಣವಾಗಿರುವ ಬಿಳಿ ಬಣ್ಣವನ್ನು ಬ್ರಹ್ಮಚಾರಿಣಿ ಧರಿಸಿದ್ದು ಎರಡನೇ ದಿನದಂದು ಬಿಳಿ ಬಣ್ಣಕ್ಕೆ ಹೆಚ್ಚಿನ ಪ್ರಧಾನ್ಯತೆ ಇರುತ್ತದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಭಕ್ತರು ಸಮೃದ್ಧಿ, ಜ್ಞಾನ ಮತ್ತು ಬುದ್ದಿವಂತಿಕೆಯನ್ನು ಪಡೆಯುತ್ತಾರೆ. ಮಾತಾ ಬ್ರಹ್ಮಚಾರಿಣಿಗೆ ಮಲ್ಲಗೆ ಹೂವುಗಳನ್ನು ಅರ್ಪಿಸಲಾಗುತ್ತದೆ.
ಬ್ರಹ್ಮಚಾರಿಣಿ ದೇವಿಯ ಕಥೆ
ವೇದಗ್ರಂಥಗಳಲ್ಲಿ ಬ್ರಹ್ಮಚಾರಿಣಿಯ ಅರ್ಥ ಪವಿತ್ರ ಧಾರ್ಮಿಕ ಜ್ಞಾನವನ್ನು ಹೊಂದಿರುವ ಮಹಿಳೆ. ಪುರಾಣಗಳ ಪ್ರಕಾರ ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡುತ್ತಾಳೆ. ತಪಸ್ಸಿನ ನಂತರ ಶಿವನು ಅವಳನ್ನು ಸ್ವಾಧಿಷ್ಠಾನ ಚಕ್ರದಲ್ಲಿ ಮದುವೆಯಾಗುತ್ತಾನೆ. ಭಗವಾನ್ ಮಂಗಳನನ್ನು ಬ್ರಹ್ಮಚಾರಿಣಿ ದೇವಿಯು ನಿಯಂತ್ರಿಸುತ್ತಾಳೆ ಎಂದು ನಂಬಲಾಗಿದೆ.
ಬ್ರಹ್ಮಚಾರಿಣಿ ದೇವಿ ಪೂಜೆ
ಬ್ರಹ್ಮಚಾರಿಣಿಯ ಆರಾಧನೆಯಿಂದ ತಪಸ್ಸು, ವೈರಾಗ್ಯ, ಸದಾಚಾರ, ಸಂಯಮಗಳು ಪ್ರಾಪ್ತಿಯಾಗುತ್ತದೆ. ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ದೇವಿಯ ವಿಗ್ರಹವಿಟ್ಟು ಕಲಶ ಸ್ಥಾಪನೆ ಮಾಡಿ ವೀಳ್ಯದೆಲೆ ಮತ್ತು ಅಡಕೆಯನ್ನು ಸಮರ್ಪಣೆ ಮಾಡಬೇಕು. ಜೊತೆಗೆ ಮಲ್ಲಿಗೆ ಹೂವನ್ನು ಅರ್ಪಿಸುವುದು ಬಹಳ ಮುಖ್ಯ. ತುಪ್ಪದ ದೀಪ ಬೆಳಗಿ ಶ್ರೀದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ದೇವಿಯ ಆಶೀರ್ವಾದ ಲಭಿಸುತ್ತದೆ. ಬ್ರಹ್ಮಚಾರಿಣಿ ಮಂತ್ರವನ್ನು ಪಠಿಸುವುದರಿಂದ ದೇವಿ ಸಂತುಷ್ಠಳಾಗಿ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಬೆಳಗ್ಗೆ ಮತ್ತು ಸಂಜೆ ನೈವೇದ್ಯ ಅರ್ಪಿಸಿ ಆರತಿ ಬೆಳಗಬೇಕು. ಬ್ರಹ್ಮಚಾರಿಣಿಗೆ ಸಕ್ಕರೆಯನ್ನು ನೈವೇದ್ಯ ಮಾಡುವುದು ತುಂಬಾ ಮುಖ್ಯ. ಯಾವುದೇ ಸಿಹಿ ಪದಾರ್ಥ ಮಾಡಿದರೂ ಸಕ್ಕರೆ ಬಳಸಿ ಮಾಡಬೇಕು. ಹಾಲು, ಮೊಸರನ್ನು ನೈವೇದ್ಯ ಮಾಡಬಹುದು.
ಬ್ರಹ್ಮಚಾರಿಣಿ ದೇವಿಯ ಮಂತ್ರ
ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ
ದೇವಿ ಪ್ರಸಿದಾಥು ಮಾಯಿ ಬ್ರಹ್ಮಚಾರಿಣ್ಯ ನುತ್ಥಮಾ