ಮಂಗಳೂರು(ಬೆಳ್ತಂಗಡಿ): ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಾಸಕ ಹರೀಶ್ ಪೂಂಜ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬ್ರ 309ರ ರಸ್ತೆಯಲ್ಲಿ ಲೋಲಾಕ್ಷ ಗೌಡ ಎಂಬವರು ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಇಲಾಖೆಯ ಸಿಬ್ಬಂದಿಗಳೊಂದಿಗೆ ಅ.9ರಂದು ಬೆಳಿಗ್ಗೆ 7.45 ಗಂಟೆಗೆ ಭೇಟಿ ನೀಡಿದ್ದೇನೆ. ಲೋಲಾಕ್ಷ ಗೌಡ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲು ಫೌಂಡೇಶನ್ ಹಾಕಿರುವುದು ಕಂಡು ಬಂದಿದ್ದು ಕೂಡಲೇ ನಿವೇಶನವನ್ನು ತೆರವು ಮಾಡುವಂತೆ ಲೋಲಾಕ್ಷ ಗೌಡ ಅವರಿಗೆ ಸೂಚಿಸಿದ್ದೇನೆ. ಅವರು ತೆರವುಗೊಳಿಸದೆ ಇರುವುದರಿಂದ ಫೌಂಡೇಶನ್ ಅನ್ನು ಇತರ ಅರಣ್ಯ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳ ಮುಖಾಂತರ ತೆರವುಗೊಳಿಸಲು ಮುಂದಾಗಿದ್ದೇನೆ. ಆ ಸಮಯದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ತಮ್ಮ ಬೆಂಬಲಿಗರೊಂದಿಗೆ ಸೇರಿ ಫೌಂಡೇಶನ್ ತೆರವುಗೊಳಿಸದಂತೆ ತಡೆದಿದ್ದಾರೆ. ಶಾಸಕ ಹರೀಶ್ ಪೂಂಜ ಅಧಿಕಾರಿಗಳ ಸಮ್ಮುಖದಲ್ಲಿ ನನ್ನನ್ನು ಉದ್ದೇಶಿಸಿ ಲೋಫರ್ ನನ್ ಮಗ ಎಂಬ ಅಸಂಸದೀಯ ಪದಗಳನ್ನು ಬಳಸಿದ್ದಾರೆ. ಸದ್ರಿ ಕಟ್ಟಡವನ್ನು ತೆರವುಗೊಳಿಸಿದ್ದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಜೀವ ಬೆದರಿಕೆ ಒಡ್ಡಿದ ಶಾಸಕ ಹರೀಶ್ ಪೂಂಜ ಹಾಗೂ ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದ ಜಯಪ್ರಕಾಶ್ ಕಾನೂನು ಸಲಹೆ ಪಡೆದು ಅ.13ರಂದು ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ್ದ ಪೊಲೀಸ್ ಠಾಣಾಧಿಕಾರಿ, ಶಾಸಕ ಹರೀಶ್ ಪೂಂಜ ವಿರುದ್ಧ ಐಪಿಸಿ 143, 353, 504 ಮತ್ತು 149ರಡಿ ಪ್ರಕರಣ ದಾಖಲಿಸಿದ್ದಾರೆ.