ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ – ಸಿಬ್ಬಂದಿಗೆ ಜೀವ ಬೆದರಿಕೆ ಆರೋಪ –  ಡಾ.ಕೆ.ವಿ. ಚಿದಾನಂದ ಸಹಿತ‌ 5 ಮಂದಿ ನ್ಯಾಯಾಲಯಕ್ಕೆ ಹಾಜರು – ಜಾಮೀನು ಮಂಜೂರು

ಮಂಗಳೂರು: ಸುಳ್ಯದ ಕುರುಂಜಿಭಾಗ್ ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅ.5ರಂದು ಅಕ್ರಮ ಪ್ರವೇಶ ಮಾಡಿ ಅಲ್ಲಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಯವರನ್ನು ಬೆದರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಡಾ. ಕೆ.ವಿ.ಚಿದಾನಂದ ಸಹಿತ 5 ಮಂದಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅವರೆಲ್ಲರಿಗೂ ನ್ಯಾಯಾಲಯ‌ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.

ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಡಾ. ಜ್ಯೋತಿ ರೇಣುಕಾ ಪ್ರಸಾದ್ ರವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.5 ರಂದು ದೂರು ನೀಡಿ, ಬಾವ ಡಾ. ಕೆ ವಿ ಚಿದಾನಂದ, ಅವರ ಪತ್ನಿ ಶೋಭಾ ಚಿದಾನಂದ, ಮಗ ಅಕ್ಷಯ್ ಕೆ ಸಿ, ಮಗಳು ಡಾ. ಐಶ್ವರ್ಯ, ಸಂಬಂಧಿ ಹೇಮನಾಥ ಕೆ ವಿ, ಜಗದೀಶ್ ಅಡ್ತಲೆ ಮತ್ತು ಇತರ ಕೆಲವರು ಅಕ್ರಮ ಪ್ರವೇಶ ಮಾಡಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿದ್ದರಲ್ಲದೆ, ಮೊಬೈಲ್ ಕೇಳಿ ಪಡೆದು, ಸಿ.ಸಿ. ಕ್ಯಾಮರಾಗಳ ಮತ್ತು ಇತರ ಮಾಹಿತಿ ಪಡೆದು ಮೊಬೈಲ್ ಹಿಂತಿರುಗಿಸಿ, ಬೆದರಿಸಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಈ ದೂರಿನ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ ಕ್ರ 115/ 2023 ಕಲಂ 448,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.17ರಂದು ಡಾ. ಕೆ ವಿ ಚಿದಾನಂದ ಮತ್ತು ತಂಡದವರು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದು, ಜಾಮೀನು ಮಂಜೂರಾಗಿದೆ ಎಂದು ತಿಳಿದುಬಂದಿದೆ. ಡಾ.ಐಶ್ವರ್ಯ ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದು, ಜಾಮೀನು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯಾಯವಾದಿ ಭಾಸ್ಕರ್ ರಾವ್ ಕಕ್ಷಿದಾರರ ಪರವಾಗಿ ವಾದಿಸಿದ್ದಾರೆ.

LEAVE A REPLY

Please enter your comment!
Please enter your name here