ಮಂಗಳೂರು: ತುಳುನಾಡಿನ ನೆಲದ ಪರಂಪರೆಯ ಹುಲಿವೇಷ ಕುಣಿತಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಿಸುವ ಮತ್ತು ಈ ಕಲಾ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸದುದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ “ಕುಡ್ಲದ ಪಿಲಿಪರ್ಬ-2023” ಹುಲಿವೇಷ ಸ್ಪರ್ಧಾಕೂಟವು ಅ.21 ರ ಶನಿವಾರದಂದು ಜಿಲ್ಲೆಯ ಕೇಂದ್ರ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ.
ಕೇಂದ್ರ ಮೈದಾನದ ಭವ್ಯ ಹಾಗೂ ವಿಶಾಲ ವೇದಿಕೆಯಲ್ಲಿ, ಜಿಲ್ಲೆಯ ಅತ್ಯಂತ ಪರಿಣಿತ ತೀರ್ಪುಗಾರರ ಸಮ್ಮುಖದಲ್ಲಿ, ಕರಾವಳಿಯ ಜನಪ್ರಿಯ 15 ಹುಲಿವೇಷ ತಂಡಗಳು ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಇಡೀ ದಿನ ಕಡಲನಗರಿ ಹುಲಿಗಳ ಭರ್ಜರಿ ಘರ್ಜನೆಗೆ ಸಾಕ್ಷಿಯಾಗಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬ ಕಲಾಪ್ರೇಮಿಗೂ ಮುಕ್ತ ಅವಕಾಶವಿದ್ದು, ಸ್ಪರ್ಧಾಕೂಟದಲ್ಲಿ ಒಂದಕ್ಕಿಂತ ಒಂದು ವಿಭಿನ್ನತೆಯಿಂದ ಕೂಡಿರುವ ಹುಲಿವೇಷ ತಂಡಗಳಿಂದ ಇಡೀ ದಿನ ಸ್ಪರ್ಧಾಕೂಟದ ಮನರಂಜನೆಯಲ್ಲಿ ಮಿಂದೇಳುವ ಅವಕಾಶವಿದೆ. ಜನಸಾಮಾನ್ಯರ ಮನರಂಜನೆಯೇ ಈ ಸ್ಪರ್ಧಾಕೂಟದ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.