ಮಂಗಳೂರು ಮಂಗಳಾದೇವಿ ದೇವಸ್ಥಾನದಲ್ಲಿ ಧರ್ಮ ದಂಗಲ್ – ಈ ನೆಲದ ಕಾನೂನಿನ ಉಲ್ಲಂಘನೆ – ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಉಸ್ತುವಾರಿ ಸಚಿವರಿಗೆ ಮನವಿ

ಮಂಗಳೂರು: ಹಿಂದೂ ವ್ಯಾಪಾರಸ್ಥರ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ದ.ಕ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.

ಸಚಿವರಿಗೆ ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಡಿ ವೈ ಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಶರಣ್ ಪಂಪ್ ವೆಲ್ ಹಾಗೂ ಅವರ ತಂಡ ದೇವಸ್ಥಾನದ ಜಾತ್ರಾ ಬೀದಿಗೆ ಬಂದು ಹಿಂದೂ ಜಾತ್ರಾ ವ್ಯಾಪಾರಿಗಳ ಅಂಗಡಿಗಳಿಗೆ ಬಜರಂಗದಳದ ಧ್ವಜ ಕಟ್ಟಿದ್ದಾರೆ. ಹಿಂದೂಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟುವ ಮೂಲಕ ಬಹಿಷ್ಕಾರದ ಕ್ರಮಕ್ಕೆ ಮುಂದಾಗಿದ್ದಾರೆ. ಮುಸ್ಲಿಂ ಜಾತ್ರಾ ವ್ಯಾಪಾರಿಗಳ ಅಂಗಡಿಗಳಿಗೆ ಬಾವುಟ ಇಲ್ಲ ಅಲ್ಲಿ ವ್ಯಾಪಾರ ಮಾಡಬಾರದು ಎಂಬ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇದು ಈ ನೆಲದ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆ ಈ ಕೂಡಲೇ ಶರಣ್ ಪಂಪ್ ವೆಲ್ ಹಾಗೂ ಅವರ ಗ್ಯಾಂಗ್ ನ್ನು ಬಂಧಿಸಬೇಕು. ಪೊಲೀಸ್ ಇಲಾಖೆ ಶರಣ್ ಪಂಪ್ ವೆಲ್ ಮುಂಭಾಗ ಮಂಡಿಯೂರಿದ ರೀತಿಯಲ್ಲಿ ಇದೆ. ಬಿಜೆಪಿ ಸಂಸದ ಹಾಗೂ ನಳಿನ್ ಕುಮಾರ್ ಕಟೀಲ್ ಶರಣ್ ಮತ್ತು ಗ್ಯಾಂಗ್ ನ್ನು ಚೂ ಬಿಟ್ಟಿದ್ದಾರೆ. ಲೋಕ ಸಭಾ ಚುನಾವಣೆ ಹಿನ್ನಲೆ ಅಭಿವೃದ್ಧಿಯಂತಹ ಯಾವುದೇ ಸಾಧನೆಗಳು ಇಲ್ಲ. ಸ್ಥಳೀಯರಿಗೆ ಉದ್ಯೋಗ ಸಹಿತ ಯಾವುದೇ ಸಾಧನೆಗಳು ಇಲ್ಲದ ಕಾರಣ. ಈ ರೀತಿ ಪ್ರಯತ್ನಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮುಂದಾಗಿದ್ದಾರೆ ಎಂದು ಹೇಳಿದ ಮುನೀರ್‌ ಕಾಟಿಪಳ್ಳ, ಕೋಮು ಶಕ್ತಿಗಳ ಮುಂದೆ ಪೊಲೀಸ್ ಇಲಾಖೆ ಮಂಡಿಯೂರಿರೋದನ್ನ ಒಪ್ಪಲು ಸಾಧ್ಯವಿಲ್ಲ. ಇದೇ ಶರಣ್ ಪಂಪ್ ವೆಲ್ ರನ್ನ ಉಡುಪಿಗೆ ಬರದಂತೆ ಅಲ್ಲಿನ ಎಸ್ಪಿ ತಡೆಯುತ್ತಾರೆ. ಆದರೆ ಮಂಗಳೂರಿನಲ್ಲಿ ಹೇಗೆ ಈ ರೀತಿ ಪುಂಡಾಟ ಮೆರೆಯಲು ಹೇಗೆ ಸಾಧ್ಯವಾಯಿತು? ಮಂಗಳಾದೇವಿಯಲ್ಲಿ ಮಾತ್ರ ನವರಾತ್ರಿ ಉತ್ಸವ ನಡೆಯುತ್ತಿದೆಯೇ? ಕುದ್ರೋಳಿ ದೇವಸ್ಥಾನದಲ್ಲೂ ನಡೆಯುತ್ತಿದೆ ಅಲ್ಲಿ ಯಾಕೆ ಬಾವುಟ ಕಟ್ಟೋದಿಲ್ಲ? ಕುದ್ರೋಳಿ ದೇವಸಸ್ಥಾನದಲ್ಲಿ ಬಾವುಟ ಕಟ್ಟಿದ್ರೆ ಅಲ್ಲಿನ ಕೋಟಿ ಚೆನ್ನಯ ಹಾಗೂ ನಾರಾಯಣ ಗುರುಗಳ ಅನುಯಾಯಿಗಳು ಈ ಗ್ಯಾಂಗ್ ಅನ್ನು ಬಸ್ಕಿ ಹೊಡೆಸ್ತಾರೆ ಎಂದು ಹೇಳಿದರು.

ಮಂಗಳಾದೇವಿ ದೇವಸ್ಥಾನ ಪರಂಪರೆಯ ದೇವಸ್ಥಾನ. ಬಡಪಾಯಿ ಯುವಕರ ರಕ್ತ ಹರಿಸಿ ಜೈಲಿಗೆ ಕಳಿಸಿ 4 ನೇ ಬಾರಿಗೆ ನಳಿನ್ ಕುಮಾರ್ ಕಟೀಲ್ ರನ್ನು ಗೆಲ್ಲಿಸುವ ಹುನ್ನಾರ ಇದಾಗಿದೆ. ಉಸ್ತುವಾರಿ ಸಚಿವರು ಇದರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಇದನ್ನ ಸವಾಲಾಗಿ ಸ್ವೀಕರಿಸಿ ಇದರ ವಿರುದ್ಧ ಹೋರಾಡುತ್ತೇವೆ.

LEAVE A REPLY

Please enter your comment!
Please enter your name here