ಮಂಗಳೂರು: ಪಂಚರಾಜ್ಯ ಚುನಾವಣೆಗೆ ಕರ್ನಾಟಕವನ್ನು ಕಾಂಗ್ರೆಸ್ ಎ ಟಿ ಎಂ ಆಗಿ ಬಳಸುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು ಬಿಜೆಪಿ ಮುಖಂಡರು ಆಧಾರ ರಹಿತ ಆರೋಪ ಮಾಡುವುದು ಒಂದು ಚಾಳಿ ಆಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡ ತೊಡಗಿದೆ. ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟ ಆಗಿದೆ. ಅವರು ಕರ್ನಾಟಕದಲ್ಲಿ ಯಾವರೀತಿ ಆಡಳಿತ ಕೊಟ್ಟಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಕರ್ನಾಟಕವನ್ನ ಎ ಟಿ ಎಂ ಗಿಂತ ಕಡೆಯಾಗಿ ದುರುಪಯೋಗ ಮಾಡಿಕೊಂಡಿದ್ದನ್ನು ಜನ ನೋಡಿದ್ದಾರೆ ಎಂದು ಹೇಳಿದ್ದಾರೆ.
ಮುಂಬರುವ ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲಿನ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಮಸಿ ಬಳಿಯುವ ಪ್ರಯತ್ನವಾಗಿ ಸುಳ್ಳಿನ ಆರೋಪ ಮಾಡುತ್ತಿದ್ದಾರೆ. ಐ ಟಿ , ಸಿಬಿಐ ಎಲ್ಲಾ ಸಂಸ್ಥೆಗಳು ಅವರ ಕೈ ಯಲ್ಲೇ ಇದೆ. ಐ ಟಿ, ಸಿಬಿಐ ಅವರ ನಿರ್ದೇಶನ ದಂತೆ ನಡೆಯುತ್ತಿದೆ. ಬಿಜೆಪಿ ಆಡಳಿತ ಸಂದರ್ಭ ಅವರ ಮುಖಂಡರ ಮೇಲೆ ಐಟಿ, ಸಿಬಿಐ ದಾಳಿ ನಾವು ನೋಡಿಲ್ಲ. ಐ ಟಿ ರೇಡ್ ಬಗ್ಗೆ ಸಿಬಿಐ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ. ಸಿಬಿಐ ಗೆ ಐಟಿ ಅವರ ಪ್ರಕರಣವನ್ನು ನೀಡಬೇಕು. ರೇಡ್ ಸಂದರ್ಭ ಯಾರಲ್ಲಿ ಹಣ ಸಿಕ್ಕಿದೆ ಅವರು ಯಾರೂ ಕಾಂಗ್ರೆಸ್ ನವರಲ್ಲ. ಯಾರೇ ತಪ್ಪುಮಾಡಿದರೆ ಅವರ ವಿರುದ್ಧ ಕ್ರಮ ಆಗಲಿ. ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷಕ್ಕೆ ಸ್ವಯಂ ಪ್ರೇರಿತರಾಗಿ ಬಂದರೆ ಅವರ ಜೊತೆ ಮಾತನಾಡಬಹುದು. ಯಾವುದೇ ಪಕ್ಷವನ್ನು ಒಡೆಯುವ ಯವುದೇ ಅವಶ್ಯಕತೆ ನಮಗಿಲ್ಲ. ಜೆಡಿಎಸ್ ನಿಂದ ಎಷ್ಟು ಜನ ಬರ್ತಾರೆ ಗೊತ್ತಿಲ್ಲ. ಆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಅವರಿಗೆ ಸಮಾಧಾನ ಇಲ್ಲದಿರಬಹುದು. ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆ ಇದ್ದೇ ಇರುತ್ತದೆ. ಆಪರೇಷನ್ ಕಮಲ ಮಾಡಿದವರು ಯಾರು? ಎಷ್ಟು ಕೆಟ್ಟರೀತಿಯಲ್ಲಿ ವ್ಯವಸ್ಥೆ ಹಾಳು ಮಾಡಿದರು ಎಂಬುದನ್ನ ಇಡೀ ದೇಶ ನೋಡಿದೆ. ಹಣಕೊಟ್ಟು , ಬೆದರಿಸಿ ಆಪರೇಷನ್ ಮಾಡೋದ್ರಲ್ಲಿ ಬಿಜೆಪಿ ಅವರು ಎಕ್ಸ್ ಪರ್ಟ್ಸ್ ಎಂದು ಸಚಿವರು ಹೇಳಿದರು.