ಆಯುಧ ಪೂಜೆ ಸಂದರ್ಭ ಪಾರಂಪರಿಕ ಕಟ್ಟಡದಲ್ಲಿ ಅರಿಶಿನ-ಕುಂಕುಮ ನಿಷೇಧ – ಬಿಜೆಪಿ ನಾಯಕರ, ಹಿಂದೂ ಸಂಘಟನೆಗಳ ವಿರೋಧ – ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ 

ಮಂಗಳೂರು(ಬೆಂಗಳೂರು): ಆಯುಧ ಪೂಜೆ ಸಂದರ್ಭದಲ್ಲಿ ಕುಂಕುಮ, ಅರಶಿನ, ಸುಣ್ಣ ಹಾಗೂ ಇತರೆ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ವಿಧಾನಸೌಧ, ವಿಕಾಸಸೌಧ ಸೇರಿದಂತೆ ಬಹುಮಹಡಿ ಕಟ್ಟಡಗಳಲ್ಲಿ ಬಳಸುವಂತಿಲ್ಲ ಎಂಬ ಸರ್ಕಾರದ ಈ ಆದೇಶ ಬಿಜೆಪಿ ನಾಯಕರ ಮತ್ತು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಸ್ಪಷ್ಟನೆ ನೀಡಿದ್ದು, ಈ ಆದೇಶ ಹೊಸದೇನಲ್ಲ. ಬಿಜೆಪಿ ಸರ್ಕಾರವೂ ಮಾಡಿತ್ತು ಎಂದು ಗೊಂದಲ ಪರಿಹರಿಸುವುದರ ಜೊತೆಗೆ ಹಳೆಯ ಆದೇಶಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅವರು, ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುತ್ತದೆ. ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here