ಮಂಗಳೂರು (ಪುತ್ತೂರು): ದುರ್ಗಾದೇವಿಯ ಒಂಭತ್ತು ರೂಪಗಳಲ್ಲಿ ಒಂದಾದ ಸ್ಕಂದಮಾತಾ ದೇವಿಯನ್ನು ನವರಾತ್ರಿಯ ಐದನೇ ದಿನದಂದು ಪೂಜಿಸಲಾಗುತ್ತದೆ. ಭಗವಾನ್ ಕಾರ್ತಿಕೇಯನ ತಾಯಿಯಾಗಿರುವುದರಿಂದ ಆಕೆಯನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ. ದೇವಿ ಸ್ಕಂದ ಮಾತಾ ತನ್ನ ಭಕ್ತರಿಗೆ ಶಕ್ತಿ, ಸಮೃದ್ಧಿ ಮತ್ತು ಮೋಕ್ಷವನ್ನು ಅನುಗ್ರಹಿಸುತ್ತಾಳೆ.
ಸ್ಕಂದಮಾತೆ ಹೀಗೆ ಕಾಣಿಸುತ್ತಾಳೆ:
ಸ್ಕಂದಮಾತೆಯು ನಾಲ್ಕು ತೋಳುಗಳನ್ನು ಹೊಂದಿದ್ದು, ಅವಳ ಬಲ ಭಾಗದ ಮತ್ತು ಎಡ ಭಾಗದಲ್ಲಿನ ಮೇಲ್ಭಾಗದ ಎರಡೂ ಕೈಗಳಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ ಹಾಗೂ ಕೆಳಗಿನ ಇನ್ನೆರಡು ಕೈಗಳಲ್ಲಿ ಒಂದು ಕೈ ಅಭಯ ಮುದ್ರೆಯನ್ನು ಹೊಂದಿದ್ದು, ಇನ್ನೊಂದು ಕೈ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡ ಹಲವು ಮುಖಗಳ ಕಾರ್ತಿಕೇಯನನ್ನು (ಸ್ಕಂದ) ಹಿಡಿದುಕೊಂಡಿದ್ದಾಳೆ. ಸಿಂಹದ ಮೇಲೆ ಸವಾರಿ ಮಾಡುವ ಈಕೆ ಭಕ್ತರಿಗೆ ಬಹಬೇಗ ಸಂತುಷ್ಟಳಾಗುವ ತಾಯಿಯಾಗಿದ್ದಾಳೆ.
ಸ್ಕಂದಮಾತೆಯನ್ನು ಪೂಜಿಸುವ ಮಹತ್ವ:
ಸ್ಕಂದಮಾತೆ ದೇವಿಯನ್ನು ಮೋಕ್ಷ ನೀಡುವ ತಾಯಿ ಎಂದು ಹೇಳಲಾಗುತ್ತದೆ. ಮಕ್ಕಳಿಲ್ಲದ ದಂಪತಿಗಳು ಸಂತಾನಕ್ಕಾಗಿ ನವರಾತ್ರಿ ಹಬ್ಬದ ದಿನದಂದು ವೃತವನ್ನು ಆಚರಿಸುವುದರಿಂದ ತಾಯಿಯ ಆಶೀರ್ವಾದ ಖಂಡಿತವಾಗಿಯೂ ಲಭಿಸುತ್ತದೆ ಎಂಬ ನಂಬಿಕೆ ಇದೆ. ಸ್ಕಂದಮಾತೆಯನ್ನು ಪ್ರಸನ್ನಗೊಳಿಸಲು ಬಾಳೆ ಹಣ್ಣು ಮತ್ತು ಅದರಿಂದ ಮಾಡಿದ ವಸ್ತುಗಳನ್ನು ನೈವೇದ್ಯವಾಗಿ ನೀಡಬೇಕು. ಈ ರೀತಿ ಮಾಡುವುದರಿಂದ ಉತ್ತಮ ಆರೋಗ್ಯವನ್ನು ತಾಯಿ ನೀಡುತ್ತಾಳೆ. ಏಕಾಗ್ರತೆಯಿಂದ ಮನಸ್ಸನ್ನು ಶುದ್ಧೀಕರಿಸಿ ದೇವಿಯನ್ನು ಸ್ತುತಿಸುವುದರಿಂದ ದುಃಖದಿಂದ ಮುಕ್ತಿ ಪಡೆದು ಮೋಕ್ಷದ ಮಾರ್ಗ ಪ್ರಾಪ್ತಿಯಾಗುತ್ತದೆ. ವಿಶುದ್ಧ ಚಕ್ರದ ಜಾಗೃತಿಯಿಂದ ಉಂಟಾಗುವ ಸಾಧನೆಗಳು ಸ್ವಯಂಚಾಲಿತವಾಗಿ ಸಾಧಿಸಲ್ಪಡುತ್ತದೆ.
ಸ್ಕಂದಮಾತೆಯ ಮಂತ್ರ:
ಯಾ ದೇವಿ ಸರ್ವಭೂತೇಷು ಮಾಂ ಸ್ಕಂದಮಾತ ರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋಃ ನಮಃ||
ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕತದ್ವಯಾ|
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ||
ಓಂ ದೇವಿ ಸ್ಕಂದಮಾತಾಯೈ ನಮಃ