ಗಾಂಧಿ – ಸಂಕ್ಷಿಪ್ತ ಜೀವನ ಕಥನ – 24

ಜನುಮದ ಜೋಡಿ: ಗಾಂಧೀಜಿ ಮತ್ತು ಕಸ್ತೂರಬಾ

ಕಸ್ತೂರಬಾ 19 ವರ್ಷಗಳ ಕಾಲ ಗಾಂಧೀಯವರರೊಂದಿಗೆ ಆಫ್ರಿಕಾದಲ್ಲಿದ್ದರು. ಭಾರತೀಯರ ಶೋಷಣೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳ ದಿನಗಳಿಂದಲೂ ಕಸ್ತೂರಬಾ ಅವರ ಸಹವರ್ತಿಯಾಗಿ ಎಲ್ಲಾ ಹೋರಾಟಗಳಲ್ಲೂ ಭಾಗವಹಿಸುತ್ತಿದ್ದರು. ಒಮ್ಮೆ ಬಂಧನಕ್ಕೂ ಒಳಗಾಗಿ  ಜೈಲುವಾಸವನ್ನೂ ಅನುಭವಿಸಿದ್ದರು. ಹೋರಾಟದ ಜೊತೆಗೆ ತಾಯಿಯಾಗಿ ಮಕ್ಕಳನ್ನು ಸಾಕುವ ಜವಾಬ್ದಾರಿಯೂ ಅವರ ಮೇಲಿತ್ತು. ಭಾರತಕ್ಕೆ ಬಂದ ಮೇಲೆ ಕೂಡ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು.

ಗಾಂಧಿಯವರು ಸಾಬರ್‌ ಮತಿಯಲ್ಲಿ ನಿರ್ಮಿಸಿದ ಆಶ್ರಮದ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು. ಖಾದಿ ತಯಾರಿಕೆಯನ್ನು ಪ್ರಾರಂಭಿಸಿದಾಗ ಬಾ ಅವರ ನೆರವಿಗೆ ನಿಂತರು. ಮಾನವ ಹಕ್ಕುಗಳ ಮತ್ತು ಭಾರತದ ಸ್ವಾತಂತ್ರ್ಯದ ಕನಸನ್ನು ಕಟ್ಟಿಕೊಂಡು ಗಾಂಧಿ ಸದಾ ಹೋರಾಟಗಳಲ್ಲಿ ಮುಳುಗಿರುತ್ತಿದ್ದರು. ಬಾ ಅವರನ್ನು ನೆರಳಿನಂತೆ ಹಿಂಬಾಲಿಸಿದರು. ಗಾಂಧಿ ಕುಟುಂಬ ಜೀವನ ನಿರ್ವಹಣೆಗೆ ಸೀಮಿತಗೊಳ್ಳದ ವಿಶ್ವ ಮಾನವ ಎನ್ನುವುದನ್ನು ಕಸ್ತೂರಬಾ ಅರಿತಿದ್ದರು. ಅವರಿಬ್ಬರ ದಾಂಪತ್ಯವು ಈ ಮುಳ್ಳಿನ ಹಾದಿಯಲ್ಲಿ ನಡೆದಷ್ಟೂ ಮಾಗುತ್ತಾ ಹೋಯಿತು. ಗಾಂಧಿಯವರು ಏರಿದ ಎತ್ತರಕ್ಕೆ ಅವರೂ ಏರಿ ನಿಂತರು. ಬಾ ಅಸ್ವಸ್ಥರಾಗಿ ಮರಣ ಹೊಂದುವವರೆಗೂ ಗಾಂಧಿಯವರ ಸರಿಸಾಟಿಯಾಗಿ ಹೋರಾಟದ ಕಣದಲ್ಲಿದ್ದರು. ದೀರ್ಘಕಾಲದವರೆಗೆ ವಿಷಮಶೀತ ಜ್ವರದಿಂದ ಬಳಲುತ್ತಿದ್ದ ಕಸ್ತೂರಬಾ 1944ರ ಫೆಬ್ರವರಿ 22ರಂದು ಸಾವನ್ನಪ್ಪಿದ್ದರು. ಆಗ ಗಾಂಧಿ ಪುಣೆಯ ಆಗಾಖಾನ್‌ ಅರಮನೆಯಲ್ಲಿ ಗೃಹಬಂಧಿಯಾಗಿದ್ದರು. 60 ವರ್ಷಗಳ ಅವರ ವೈವಾಹಿಕ ಬಂಧುತ್ವ ಕೊನೆಗೊಂಡಿತು.

LEAVE A REPLY

Please enter your comment!
Please enter your name here