ಮಂಗಳೂರು: ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ಅ.16ರಂದು ಶ್ರೀ ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಹಿಂದೂಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಶರಣ್ ಪಂಪ್ವೆಲ್ ಅವರು ಇತರ ಕಾರ್ಯಕರ್ತರೊಂದಿಗೆ ಕೇಸರಿ ಧ್ವಜಗಳನ್ನು ಕಟ್ಟಿದ್ದರು.
ಈ ಕ್ರಮಗಳು ಮತ್ತು ಹೇಳಿಕೆಗಳು ಧಾರ್ಮಿಕ ವೈಷಮ್ಯವನ್ನು ಕೆರಳಿಸುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅ.18ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ ಮನೋಹರ್ ಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ ಶರಣ್ ಪಂಪ್ವೆಲ್ ಹಾಗೂ ಇತರರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಖಂಡಿಸಿತ್ತು. ಕೇಸು ದಾಖಲಾದ 24 ಗಂಟೆಯೊಳಗಾಗಿ ಶರಣ್ ಪಂಪ್ ವೆಲ್ ವಿರುದ್ಧದ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೈಕೋರ್ಟ್ ನಲ್ಲಿ ಶರಣ್ ಪಂಪ್ ವೆಲ್ ಪರ ತಡೆಯಾಜ್ಞೆಗೆ ವಾದ ಮಂಡಿಸಿದ್ದರು.