ಸಣ್ಣ ಭಾಷೆಗಳಿಗೂ ಅಕಾಡೆಮಿ ಸ್ಥಾಪನೆಯಾಗಲಿ – ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಎ.ಕೆ.ಹಿಮಕರ 

ಮಂಗಳೂರು : ಕುಂದಕನ್ನಡ, ಕೊರಗ ಭಾಷೆ ಸೇರಿದಂತೆ ಸಣ್ಣ ಭಾಷೆಗಳ ಬೆಳವಣಿಗೆಗೆ ಅಕಾಡೆಮಿಯ ಸ್ಥಾಪನೆ ಅಗತ್ಯವಿದೆ ಎಂದು ಸುಳ್ಯ ಬಂಟಮಲೆ ಅಕಾಡೆಮಿಯ ಅಧ್ಯಕ್ಷ ಎ.ಕೆ.ಹಿಮಕರ ಅವರು ಆಗ್ರಹಿಸಿದ್ದಾರೆ.

ತುಳು ಪರಿಷತ್ ವತಿಯಿಂದ ಮಯೂರಿ ಫೌಂಡೇಶನ್ ಸಹಭಾಗಿತ್ವದಲ್ಲಿ ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ಆಯೋಜಿಸಲಾದ ಎರಡನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಯಾ ಪ್ರದೇಶದ ಜನರು ತಮ್ಮ ಮಿತಿಯಲ್ಲಿ ತಮ್ಮ ಭಾಷೆಯ ಸಂರಕ್ಷಣೆಗಾಗಿ ಕಾರ್ಯಪ್ರವೃತ್ತರಾಗಬೇಕು , ಇದೇ ವೇಳೆ ನಮ್ಮ ನಡುವೆ ಇರುವ ಸಣ್ಣ ಭಾಷೆಗಳ ಅಭಿವೃದ್ಧಿ, ಬೆಳವಣಿಗೆ ಸಲುವಾಗಿ ಸರಕಾರ ಇಂತಹ ಭಾಷೆಗಳ ಅಕಾಡೆಮಿ ಆರಂಭಿಸಬೇಕು ಎಂದು ಎ.ಕೆ.ಹಿಮಕರ ಒತ್ತಾಯಿಸಿದರು.

ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕಿ ಹಾಗೂ ಲೇಖಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಮಾತನಾಡಿ, ತುಳುನಾಡಿನ ಭಾಷಾ ವೈವಿಧ್ಯತೆ ನಮ್ಮ ಪ್ರದೇಶದ ಅನನ್ಯತೆಯಾಗಿದ್ದು, ನಮ್ಮಲ್ಲಿ ಹಲವು ಭಾಷೆಗಳು, ಹಲವು ಧರ್ಮಗಳಿದ್ದರೂ ನಮ್ಮಲ್ಲಿ ಭಾಷಾ ಸಾಮರಸ್ಯದ ಮೂಲಕ ಧರ್ಮ ಸಾಮರಸ್ಯ ನೆಲೆಯಾಗಿದೆ ಎಂದು ಅಭಿಪ್ರಾಯಪಟ್ಟರು. ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳುನಾಡಿನ ಹನ್ನೆರಡು ಭಾಷೆ ಹಾಗೂ ಹಿಂದಿ ಸೇರಿದಂತೆ ಒಟ್ಟು ಹದಿಮೂರು ಭಾಷೆಗಳಲ್ಲಿ 22 ಕವಿಗಳು ಕವಿತಾ ವಾಚನ ಮಾಡಿದರು. ತುಳು, ಕನ್ನಡ, ಬ್ಯಾರಿ, ಅರೆಭಾಷೆ, ಕುಂದ ಕನ್ನಡ, ಹವ್ಯಕ ಕನ್ನಡ , ಶಿವಳ್ಳಿ ತುಳು, ಸ್ಥಾನಿಕ ತುಳು , ಕೊರಗ ಭಾಷೆ, ಜಿ.ಎಸ್. ಬಿ ಕೊಂಕಣಿ , ಕ್ರೈಸ್ತ ಕೊಂಕಣಿ , ಮಳಯಾಲಂ, ಹಿಂದಿ ಭಾಷೆಗಳ ಕವಿಗಳ ಕವಿತೆ ಪ್ರೇಕ್ಷಕರ ಮನಸೊರೆಗೊಂಡಿತು. ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು.

 

LEAVE A REPLY

Please enter your comment!
Please enter your name here