ಮಂಗಳೂರು: ನವರಾತ್ರಿಯ ಆರನೇ ದಿನದಂದು ತಾಯಿ ಕಾತ್ಯಾಯಿನಿಯನ್ನು ಪೂಜಿಸಲಾಗುತ್ತದೆ. ಅಲ್ಲದೆ, ಆಕೆಗಾಗಿ ಉಪವಾಸವನ್ನು ಆಚರಿಸಲಾಗುತ್ತದೆ. ತಾಯಿ ಕಾತ್ಯಾಯಿನಿಯನ್ನು ಆರಾಧಸುವುದರಿಂದ ಸಾಧಕನು ಮೃತ್ಯು ಲೋಕದಲ್ಲಿ ಸ್ವರ್ಗ ಸದೃಶ ಸುಖಗಳನ್ನು ಪಡೆಯುತ್ತಾನೆ. ಆದಾಯ, ಅದೃಷ್ಟ, ದೀರ್ಘಾಯುಷ್ಯವಲ್ಲದೆ ವಿಶೇಷ ಅನುಗ್ರಹವನ್ನು ಪಡೆಯಬಹುದು.
ಕಾತ್ಯಾಯಿನಿ ದೇವಿಯ ಸ್ವರೂಪ
ದುರ್ಗೆಯ ಅವತಾರಗಳಲ್ಲಿ ಒಂದಾದ ಕಾತ್ಯಾಯಿನಿ ನಾಲ್ಕು ತೋಳುಗಳನ್ನು ಹೊಂದಿದ್ದು, ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ತನ್ನೆರಡು ಕೈಗಳಲ್ಲಿ ಕಮಲ ಮತ್ತು ಖಡ್ಗವನ್ನು ಹಿಡಿದಿದ್ದು, ಇನ್ನೆರಡು ಕೈಗಳ ಪೈಕಿ ಒಂದರಲ್ಲಿ ವರ ಮುದ್ರೆಯನ್ನು, ಮತ್ತೊಂದು ಕೈಯಲ್ಲಿ ಅಭಯ ಮುದ್ರೆ ಇದೆ. ಕಾತ್ಯಾಯಿನಿ ದೇವಿಯು ಕೆಂಪು ಬಣ್ಣವನ್ನು ಹೆಚ್ಚಾಗಿ ಇಷ್ಟ ಪಡುವುದರಿಂದ ಕೆಂಪು ಬಣ್ಣದ ಗುಲಾಬಿ ಹೂವುಗಳನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೇವಿಗೆ ಜೇನುತುಪ್ಪ ಅತ್ಯಂತ ಪ್ರಿಯವಾಗಿದ್ದು ಇದನ್ನು ಅರ್ಪಿಸುವುದರಿಂದ ಭಕ್ತನ ವ್ಯಕ್ತಿತ್ವದಲ್ಲಿ ಸುಧಾರಣೆಯಾಗುತ್ತದೆ.
ಕಾತ್ಯಾಯಿನಿ ದೇವಿ ಕಥೆ
ಧಾರ್ಮಿಕ ಪುರಾಣಗಳ ಪ್ರಕಾರ, ದೇವತೆಗಳ ಸಂಯೋಜಿತ ಶಕ್ತಿಗಳಿಂದ ಕಾತ್ಯಾಯಿನಿಯು ಪ್ರಕಟಗೊಂಡು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು. ಮಹಿಷಾಸುರನು ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದು ತನ್ನ ರೂಪವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕೆ ಬಳಸುತ್ತಾನೆ. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಯನ್ನು ಒಂದುಗೂಡಿಸಿದರು. ಇದರಿಂದ ಕಾತ್ಯಾಯಿನಿ ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ.
ಕಾತ್ಯಾಯಿನಿ ದೇವಿಯ ಪೂಜಾ ವಿಧಾನ
ಕಾತ್ಯಾಯಿನಿ ದೇವಿಯನ್ನು ಸಂದ್ಯಾ ಕಾಲದಲ್ಲಿ ದೀಪ, ಧೂಪ, ಗುಗ್ಗುಲುಗಳಿಂದ ಪೂಜಿಸಬೇಕು. ಈ ಸಮಯದಲ್ಲಿ ಹಳದಿ ಅಥವಾ ಕೆಂಪು ವಸ್ತ್ರವನ್ನು ಧರಿಸಿ ಪೂಜಿಸುವುದು ಉತ್ತಮ. ಹಳದಿ ಹೂವುಗಳು ಮತ್ತು ಹಳದಿ ನೈವೇದ್ಯ ಮತ್ತು 3ತುಂಡು ಅರಶಿನ ಅರ್ಪಿಸಿ, ದೀಪ ಬೆಳಗಿ ಪೂಜಿಸಿ. ಅರಶಿನ ತುಂಡುಗಳನ್ನು ನಿಮ್ಮ ಬಳಿ ಸುರಕ್ಷಿತವಾಗಿಟ್ಟುಕೊಳ್ಳಿ. ದೇವಿಗೆ ಜೇನುತುಪ್ಪವನ್ನು ಬೆಳ್ಳಿ ಅಥವಾ ಮಣ್ಣಿನ ಪಾತ್ರೆಯಲ್ಲಿ ಅರ್ಪಿಸಿದರೆ ಉತ್ತಮ. ತಾಯಿಗೆ ಪರಿಮಳಯುಕ್ತ ಹೂವುಗಳನ್ನು ಅರ್ಪಿಸುವುದರಿಂದ ವಿವಾಹ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ.
ಕಾತ್ಯಾಯಿನಿ ದೇವಿ ಮಂತ್ರ
ಓಂ ಹ್ರೀಂ ನಮಃ l
ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ l
ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನವಘಾತಿನೀ ll
ಓಂ ದೇವಿ ಕಾತ್ಯಾಯಿನ್ಯೈ ನಮಃ ll
ಯಾ ದೇವಿ ಸರ್ವಭೂತೇಷು ಮಾಂ ಕಾತ್ಯಾಯಿನೀ ರೂಪೇಣ ಸಂಸ್ಥಿತಾ l
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ll