ಮಂಗಳೂರು(ಬೆಂಗಳೂರು): ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳ ಟಾರ್ಗೆಟ್ ಮಾಡಲಾಗುತ್ತಿದೆ. ಮುಸ್ಲಿಂ ದರ್ಗಾಗಳಲ್ಲಿರುವ ನವಿಲುಗರಿಗಳ ವಿರುದ್ಧ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹುಲಿ ಉಗುರು ಪ್ರಕರಣಕ್ಕೆ ಧರ್ಮದ ಟಚ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಲ್ಲದ್, ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಮುಸ್ಲಿಂ ದರ್ಗಾಗಳಲ್ಲಿ ನವಿಲುಗರಿಗಳನ್ನು ಬಳಕೆ ಮಾಡುತ್ತಾರೆ. ಇದು ಕೂಡ ಕಾನೂನಿಗೆ ವಿರುದ್ಧವಾಗಿದ್ದು ದರ್ಗಾಗಳ ಮೇಲೂ ಕ್ರಮ ತೆಗೆದುಕೊಳ್ಳುವಂತಾಗಲಿ. ಕೇವಲ ಹಿಂದೂ ಧರ್ಮ ಟಾರ್ಗೆಟ್ ಮಾಡಿ ಕೇಸು ಹಾಕುವಂತಾಗಬಾರದು ಎಂದು ಬೆಲ್ಲದ್ ಆಗ್ರಹಿಸಿದ್ದಾರೆ. ಮುಸ್ಲಿಂ ಮೌಲ್ವಿಗಳ ವಿರುದ್ದ ರೇಡ್ ಮಾಡಿ ಕೇಸು ಹಾಕಬೇಕು. ಎಲ್ಲಾ ಮೌಲ್ವಿಗಳಿಗೂ ಏಳೇಳು ವರ್ಷ ಶಿಕ್ಷೆ ಕೊಡಿ ಆಗ ನಿಮ್ಮ ಅರಣ್ಯ ರಕ್ಷಣಾ ಕಾಳಜಿ ಎಷ್ಟಿದೆ ಎಂದು ಗೊತ್ತಾಗುತ್ತದೆ. ಕೇವಲ ಹಿಂದೂ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ. ಈ ಸಂಬಂಧ ಸರಕಾರಕ್ಕೆ ಪತ್ರ ಬರೆದು ಆಗ್ರಹಿಸುವುದಾಗಿ ಶಾಸಕರು ಹೇಳಿದರು. ಸತ್ತ ಪ್ರಾಣಿಗಳ ಚರ್ಮ ಇಟ್ಟುಕೊಳ್ಳುವುದು ನಮ್ಮ ಸಾಧು ಸಂತರು ಮೊದಲಿನಿಂದಲೂ ಪಾಲಿಸಿಕೊಂಡು ಬಂದ ಪದ್ದತಿ ಸಲ್ಮಾನ್ ಖಾನ್ ನಂತೆ ಜಿಂಕೆ ಸಾಯಿಸಿ ಅದರ ಚರ್ಮ ಬಳಸಲ್ಲ. ಕಾನೂನು ಪಾಲಿಸಿದರೆ 100% ಪಾಲಿಸಿ. ಕಾನೂನು ಕೇವಲ ಹಿಂದೂ ಸಮಾಜಕ್ಕೆ ಮಾತ್ರವಲ್ಲ ಮುಸ್ಲಿಂರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು.