ಮಂಗಳೂರು: ಹಿರಿಯ ಕೊಂಕಣಿ ಲೇಖಕ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜ (75) ಅ.26ರಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರದ ವೆಲೆನ್ಸಿಯಾ ನಿವಾಸಿಯಾಗಿದ್ದ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜ 1964ರಲ್ಲಿ ಕೊಂಕಣಿ ಭಾಷೆಯಲ್ಲಿ ಸಣ್ಣ ಕಥೆಯನ್ನು ಬರೆಯಲು ಆರಂಭಿಸಿದ ಅವರು ಬಳಿಕ 33 ಕಾದಂಬರಿಗಳು, 100ಕ್ಕೂ ಅಧಿಕ ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅವರ ಅನೇಕ ಸಣ್ಣ ಕಥೆಗಳು ಇಂಗ್ಲಿಷ್, ಕನ್ನಡ, ಹಿಂದಿ, ಕಾಶ್ಮೀರಿ, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.
ಎಡ್ವಿನ್ ಅವರ ಸಾಹಿತ್ಯ ಕೊಡುಗೆಗಳಿಗಾಗಿ ರಾಜ್ಯ, ಅಂತರ್ ರಾಜ್ಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಪ್ರಸಿದ್ಧ ಸಣ್ಣ ಕಥೆ ‘ಎ ಕಪ್ ಆಫ್ ಹಾಟ್ ಕಾಫಿ’ ಜೈಕೋ ಬುಕ್ಸ್ ಪ್ರಕಟಿಸಿದ ಭಾರತೀಯ ಸಣ್ಣ ಕಥೆಗಳು ಸಂಕಲನದಲ್ಲಿ ಪ್ರಕಟಗೊಂಡಿದೆ. ಅವರ ಹೃದಯಸ್ಪರ್ಶಿ ಸಣ್ಣ ಕಥೆ ‘ಚಾಕೊಲೇಟ್‌ಗಳು’ ರೀಡರ್ಸ್ ಡೈಜೆಸ್ಟ್ ಗೈಡ್ ಟು ಫುಡ್, ವಿಶೇಷ ಕಲೆಕ್ಟರ್ಸ್ ಎಡಿಶನ್‌ನಲ್ಲಿ ಎರಡು ಬಾರಿ ಪ್ರಕಟಗೊಂಡಿದೆ. ಇಂಗ್ಲಿಷ್‌ನಿಂದ ಕೊಂಕಣಿಗೆ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ.