ಮಂಗಳೂರು(ಮಡಿಕೇರಿ): ಅಳಿವಿನಂಚಿನಲ್ಲಿರುವ ಜೀವಿ ಎಂದೇ ಹೇಳಲಾದ ಸುಮಾರು 5ರಿಂದ 6 ಅಡಿ ಉದ್ದದ ಬೃಹತ್ ಗಾತ್ರದ ಉಡವೊಂದು ಕೊಡಗು ಜಿಲ್ಲೆಯ ಪೊನ್ನಂಪೇಟೆಯ ತಾಲ್ಲೂಕಿನ ಕುಂದಾ ಗ್ರಾಮದ ಮನೆಯೊಂದರ ಸಮೀಪ ಪತ್ತೆಯಾಗಿದೆ.
ಇಲ್ಲಿನ ಕೊಡಂದೇರ ದಿಲೀಪ್ ಎಂಬವರ ಮನೆ ಸಮೀಪ ಕಂಡು ಬಂದ ಈ ದೈತ್ಯ ಉಡವು ಕಾಂಪೌಂಡ್ ಗೋಡೆಯ ಮೇಲೆ ಕುತ್ತಿಗೆ ಹಾಕಿ ಕೆಲಹೊತ್ತು ಇಣುಕಿ ನೋಡುತ್ತಾ ನಿಂತಿದೆ. ಜನರ ಗಮನಕ್ಕೆ ಬರುತ್ತಲೇ ಕಾಡಿನಲ್ಲಿ ಮರೆಯಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಉಡವನ್ನು ಈ ಹಿಂದೆ ನೋಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಮೀಪದ ಕುಂದಾಬೆಟ್ಟದ ಬಳಿ ಗವಿಗಳು ಮತ್ತು ದೊಡ್ಡ ಬಂಡೆಗಳಿಂದ ಕೂಡಿದ ದಟ್ಟವಾದ ಅರಣ್ಯವಿದ್ದು ಅಲ್ಲಿಂದ ಈ ಉಡ ಬಂದಿರುವ ಸಾಧ್ಯತೆ ಇದೆ ಎಂಬುವುದು ಸ್ಥಳೀಯರ ಅಭಿಪ್ರಾಯ ಪಡುವ ಸ್ಥಳೀಯರು ಉಡದ ಚಲನವಲನದ ವಿಡಿಯೊ ಹಾಗೂ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಉಡಗಳ ಸಂತತಿ ಅಳಿವಿನಂಚಿನಲ್ಲಿದ್ದು, ಬಹಳಷ್ಟು ಉಡಗಳು ಬೇಟೆಗೆ ಬಲಿಯಾಗಿವೆ. ಇಲ್ಲಿ ಕಾಣಿಸಿಕೊಂಡಿರುವ ಉಡವು ಜಗತ್ತಿನಲ್ಲೇ ಅಪರೂಪ ಎನಿಸುವ ಕೊಮೊಡೊ ಡ್ರ್ಯಾಗನ್ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಇಲ್ಲಿನ ಡಿಆರ್‌ಎಫ್‌ಒ ದಿವಾಕರ್ ಪ್ರತಿಕ್ರಿಯಿಸಿದ್ದು, ಇಷ್ಟೊಂದು ದೊಡ್ಡ ಗಾತ್ರದ ಉಡವನ್ನು ನಾನು ಸಹ ಈ ಭಾಗದಲ್ಲಿ ನೋಡಿಲ್ಲ. ಇದು ಕೊಮೊಡೊ ಡ್ರ್ಯಾಗನ್ ಎಂಬುದು ಖಚಿತವಲ್ಲದಿದ್ದರೂ, ಈ ಭಾಗದಲ್ಲಿ ಅಪರೂಪ ಎನಿಸುವಷ್ಟು ದೊಡ್ಡಗಾತ್ರದ ಉಡ ಇದಾಗಿದೆ. ಜನರು ಭಯಪಡುವ ಅಗತ್ಯ ಇಲ್ಲ. ಮತ್ತೊಮ್ಮೆ ಕಾಣಸಿಕ್ಕರೆ ವಿಷಯ ತಿಳಿಸುವಂತೆ ಸ್ಥಳೀಯರಿಗೆ ಹೇಳಿದ್ದೇವೆ’ ಎಂದು ಹೇಳಿದ್ದಾರೆ.