ಮಂಗಳೂರು : ಸುಧೀರ್ ಅತ್ತಾವರ ನಿರ್ದೇಶನದ ʼಕೊರಗಜ್ಜʼ ಸಿನಿಮಾದ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಹಾಕಿದ್ದ ಸೆಟ್ ತೆಗೆದು ಸಿನಿಮಾ ತಂಡ ಮರಳಿದ ಘಟನೆ ನಡೆದಿದೆ. ಕುದುರೆಮುಖ ಸಮೀಪದ ಕಳಸದಲ್ಲಿ ಮೈದಾಡಿ ಗುಡ್ಡದಲ್ಲಿ “ಕೊರಗಜ್ಜ” ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ದೈವಾರಾಧನೆ ಮಾಡುವ ಸಮುದಾಯ ದಾಂಧಲೆ ಮಾಡಿದ್ದು ಚಿತ್ರತಂಡ ಶೂಟಿಂಗ್ ಸ್ಥಗಿತಗೊಳಿಸಿ ಮರಳಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕನ್ನಡ ಸಿನಿಮಾದ ಶೂಟಿಂಗ್ ವೇಳೆ ಕಾನೂನು ಮೀರಿ ದೈವದ ಕೃತಕ ಕೊಡಿಯಡಿ ನಿರ್ಮಿಸಿ, ಕೃತಕ ವೇಷಭೂಷಣ ಇತ್ಯಾದಿ ಧರಿಸಿಕೊಂಡು ಸಿನಿಮಾ ತಂಡ ಶೂಟಿಂಗ್ ಮಾಡುತ್ತಿತ್ತು ಎನ್ನಲಾಗಿದೆ. ಈ ವಿಚಾರ ಅರಿತ ಚಿಕ್ಕಮಗಳೂರು ವಲಯದ ನಲ್ಕೆ ಸಂಘದ ಸದಸ್ಯರು ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಇಷ್ಟಾಗುತ್ತಲೇ ಸಿನಿಮಾ ತಂಡ ತರಾತುರಿಯಲ್ಲಿ ಚಿತ್ರೀಕರಣಕ್ಕೆ ಹಾಕಿದ್ದ ಸೆಟ್‌ಗಳನ್ನು ತೆಗೆದು, ಶೂಟಿಂಗ್ ಸ್ಥಗಿತಗೊಳಿಸಿ ಅಲ್ಲಿಂದ ತೆರಳಿದೆ ಎನ್ನಲಾಗಿದೆ.
ಖ್ಯಾತ ಬಾಲಿವುಡ್ ಕೋರಿಯೋಗ್ರಾಫರ್ ಗಣೇಶ್ ಆಚಾರ್ಯ, ನಟಿ ಶುಭ ಪೂಂಜಾ ಮೊದಲಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಯಾರಿಗೂ ಏನೂ ತೊಂದರೆ ಆಗಿಲ್ಲ. ಬದಲಿಗೆ ಸಿನಿಮಾಕ್ಕಾಗಿ ಹಾಕಿದ ಸೆಟ್ ನಾಶಗೊಂಡಿದೆ. ಶುಭ ಪೂಂಜಾ ನೃತ್ಯ ಮಾಡುತ್ತಿದ್ದಾಗ ಕೈ ಹಿಡಿದು ಎಳೆದಾಡಿದ್ದಾರೆ. ತಕ್ಷಣ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ದೈವಾರಾಧನೆ ಮಾಡುವ ಸಮುದಾಯದಿಂದ ಈ ರೀತಿ ಆಗಿದೆ. . ಆವೇಶದಲ್ಲಿದ್ದ ಕೆಲವು ಮಂದಿ ಶೂಟಿಂಗ್ ಸೆಟ್‌ಗೆ ಬಂದಿದ್ದು, ನಂತರ ಇನ್ನೊಂದು ತಂಡ ಸೆಟ್‌ನ್ನು ಪರಿಶೀಲನೆ ಮಾಡಿದ್ದಾರೆ ಎಂದು ಮಾಧ್ಯಮವೊಂದಕ್ಕೆ ನಿರ್ದೇಶಕ ಸುಧೀರ್ ಅವರು ಹೇಳಿರುವುದಾಗಿ ವರದಿಯಾಗಿದೆ.
ಚಿತ್ರೀಕರಣಕ್ಕೆ ಪೊಲೀಸರಿಂದ ಅನುಮತಿ ಪಡೆಯಲಾಗಿದ್ದು, ಲಕ್ಷಾಂತರ ಮೌಲ್ಯದ ಸೆಟ್ ಹಾಕಲಾಗಿತ್ತು. ಈ ಘಟನೆ ಕುದುರೆ ಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಚಿತ್ರತಂಡದವರು ಪೊಲೀಸರಿಗೆ ದೂರು ನೀಡಿದ ಬಗ್ಗೆ ವರದಿಯಾಗಿಲ್ಲ. ನನಗೆ ನನ್ನ ಟೀಮ್ ಮುಖ್ಯವಾಗಿತ್ತು. ಮಂಗಳೂರಿನಲ್ಲಿ ಶೂಟ್ ಮಾಡುವಾಗಲೂ ಹೀಗೆ ಆಗಿತ್ತು. ಭೂತಾರಾಧನೆ ಕುರಿತು ಸಿನಿಮಾ ಮಾಡಬಾರದು ಎನ್ನುವ ಕಾರಣಕ್ಕೆ ಈ ರೀತಿ ಆಗಿದೆ ಎಂದೆನಿಸುತ್ತದೆ. ಕೊರಗಜ್ಜನ ಸಿನಿಮಾ ಮಾಡುತ್ತಿರುವ ಕಾರಣ ಈ ರೀತಿ ಮಾಡಲಾಗಿದೆ. ಬಹುಶಃ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ ಹೇಳಿದ್ದಾರೆ.
ಈ ಹಿಂದೆ ಕೊರಗಜ್ಜ ಸಿನಿಮಾ ಶೂಟ್ ಆರಂಭಕ್ಕೂ ಮುನ್ನ ಪುತ್ತೂರಿನಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತಿತ್ತು. ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಮೂರ್ಛೆ ಹೋಗತೊಡಗಿದ್ದರು. ಸೆಟ್ ಹಾಕಲಿದ್ದ ಈ ಜಾಗ ಕರಾವಳಿಯ ಉಗ್ರ ರೂಪದ ದೈವ ಗುಳಿಗನ ಸ್ಥಳವೆಂದು ಸ್ಥಳೀಯರು ತಿಳಿಸಿದ ಬಳಿಕ ಬೇರೆಕಡೆ ಸೆಟ್ ನಿರ್ಮಾಣ ಮಾಡಲಾಯಿತು ಎಂದು ಸುಧೀರ್ ನೆನಪಿಸಿಕೊಂಡರು.