ಮಂಗಳೂರು: ಕೇರಳದ ಕಣ್ಣೂರಿನ ಎಸ್ ಪಿ ಯಾಗಿದ್ದ ಶ್ರೀಜಿತ್ ಐ ಪಿ ಎಸ್ ಅವರ ನೈಜ್ಯಕತೆಯನ್ನಾಧರಿಸಿದ “ಕಣ್ಣೂರು ಸ್ಕ್ವಾಡ್” ಸಿನಿಮಾವನ್ನು ಪುತ್ತೂರು ವಿಭಾಗದ ಪೊಲೀಸರು ವೀಕ್ಷಿಸಿದರು. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ನಟನೆಯ ಕಣ್ಣೂರು ಸ್ಕ್ವಾಡ್ ಕಣ್ಣೂರಿನಲ್ಲಿ ನಡೆದ ಕೊಲೆಯೊಂದರ ಕುರಿತು ಪೊಲೀಸ್ ತನಿಖೆಯ ಕಥಾವಸ್ತುವನ್ನು ಹೊಂದಿದ್ದು ಅ.26ರಂದು ಪೊಲೀಸರಿಗಾಗಿ ವಿಶೇಷ ಉಚಿತ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪುತ್ತೂರು ನಗರ ಠಾಣೆ, ಮಹಿಳಾ ಠಾಣೆ, ಟ್ರಾಫಿಕ್, ಸುಳ್ಯ, ಬೆಳ್ಳಾರೆ, ಕಡಬ, ಉಪ್ಪಿನಂಗಡಿ ಸೇರಿದಂತೆ ಎಲ್ಲಾ ಠಾಣೆಗಳ ಸುಮಾರು 150ಕ್ಕೂ ಮಿಕ್ಕಿದ ಪೊಲೀಸ್ ಸಿಬ್ಬಂದಿಗಳು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಪುತ್ತೂರಿನ ಜಿಎಲ್ ಸಮೂಹ ಸಂಸ್ಥೆ ವತಿಯಿಂದ ಜಿಎಲ್ ವನ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಪುತ್ತೂರು ವಿಭಾಗದ ಪೊಲೀಸರಿಗೆ ಉಚಿತ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಪುತ್ತೂರು ಡಿವೈಎಸ್ ಪಿ ಡಾ.ಗಾನ ಪಿ ಕುಮಾರ್, ಜಿಎಲ್ ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ್ ಆಚಾರ್ಯ ಪೊಲೀಸರೊಂದಿಗಿದ್ದು ಸಿನಿಮಾ ವೀಕ್ಷಿಸಿದರು.
ರೋಬಿ ವರ್ಗೀಸ್ ನಿರ್ದೇಶನದಲ್ಲಿ ಐಪಿಎಸ್ ಅಧಿಕಾರಿ ಶ್ರೀಜಿತ್ ಅವರ ನೈಜ ಕಥೆಯನ್ನಾಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು ಮಹಮ್ಮದ್ ಶಫಿ ಚಿತ್ರಕಥೆ ಬರೆದಿದ್ದಾರೆ. ನಟ ಮಮ್ಮುಟ್ಟಿ ಅವರ ಚಿತ್ರ ನಿರ್ಮಾಣ ಸಂಸ್ಥೆ ಮಮ್ಮುಟ್ಟಿ ಕಂಪೆನಿ ಈ ಚಿತ್ರದ ನಿರ್ಮಾಣ ಮಾಡಿದ್ದು 28 ಕೋಟಿ ರೂಪಾಯಿ ಬಜೆಟ್ ನಲ್ಲಿ ಚಿತ್ರ ನಿರ್ಮಿಸಲಾಗಿದೆ.
ಜಿ ಎಲ್ ವನ್ ಮಾಲ್ ಮ್ಯಾನೇಜರ್ ಸಂತೋಷ್ ನಾಯಕ್ ಅಜೇರು ಹಾಗೂ ಸಿಬ್ಬಂದಿಗಳು ಪೂರ್ಣ ಸಹಕಾರ ನೀಡಿದರು.