ಮಂಗಳೂರು: ಪುತ್ತೂರು ವಿಧಾನಸಭೆ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ 1010 ಕೋಟಿ ರೂ. ಅನುದಾನ ಬಂದಿದ್ದು, ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಕೊಯ್ಲದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ 24 ಕೋಟಿ ಅನುದಾನ ಬಂದಿದ್ದು, ಮುಂದಿನ ವರ್ಷದಿಂದಲೇ ಕಾಲೇಜು ಆರಂಭಿಸುತ್ತೇವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಶು ವೈದ್ಯಕೀಯ ಕಾಲೇಜಿಗೆ ಸಿದ್ದರಾಮಯ್ಯ ಸರಕಾರ ಇದ್ದಾಗಲೇ ಅನುದಾನ ಬಿಡುಗಡೆಗೊಂಡು ಕಟ್ಟಡ ರೆಡಿಯಾಗಿತ್ತು. ಕಳೆದು ಐದು ವರ್ಷಗಳಲ್ಲಿ ಬಿಜೆಪಿ ಸರಕಾರ ಇದ್ದರೂ ಕೆಲಸ ಪೂರ್ತಿಯಾಗಿರಲಿಲ್ಲ. ಧೂಳು ತಿನ್ನುತ್ತಿದ್ದ ಕಟ್ಟಡದಲ್ಲಿ ನವೀಕರಣ ಕೈಗೊಂಡು ಮುಂದಿನ ವರ್ಷದಲ್ಲೇ ಕಾಲೇಜು ಆರಂಭಿಸಲಾಗುವುದು ಎಂದು ಹೇಳಿದರು.
ಸುಳ್ಯ, ಪುತ್ತೂರಿನಿಂದ ಹಾಲನ್ನು ಮಂಗಳೂರಿಗೆ ತಂದು ಸಂಸ್ಕರಣೆ ಮಾಡುವುದರ ಬದಲು ಕೆಎಂಎಫ್ ಸಂಸ್ಥೆಯ ಇನ್ನೊಂದು ಪ್ಲಾಂಟನ್ನು ಪುತ್ತೂರಿನಲ್ಲೇ ಸ್ಥಾಪಿಸಲು ಯೋಜನೆ ಹಾಕಿದ್ದೇವೆ. ಅದಕ್ಕಾಗಿ 10 ಎಕರೆ ಜಾಗ ಗುರುತಿಸಲಾಗಿದ್ದು, ಹಾಲು ಸಂಸ್ಕರಣಾ ಕೇಂದ್ರ ಸ್ಥಾಪನೆ ಮಾಡುತ್ತೇವೆ ಎಂದು ಅಶೋಕ್ ರೈ ಹೇಳಿದರು. ಇದಲ್ಲದೆ, ಬೆಂಗಳೂರಿನಲ್ಲಿ ತುಳು ಭವನ ನಿರ್ಮಿಸಲಾಗುವುದು. ಕರಾವಳಿ ಭಾಗದ ಬಹಳಷ್ಟು ಮಂದಿ ಬೆಂಗಳೂರಿನಲ್ಲಿದ್ದಾರೆ. ಇಲ್ಲಿನವರು ತಾತ್ಕಾಲಿಕವಾಗಿ ಉಳಿದುಕೊಳ್ಳಲು ತುಳು ಭವನ ಸ್ಥಾಪನೆ ಮಾಡಲಾಗುವುದು. ತುಳು ಭಾಷೆಯನ್ನು ದ್ವಿತೀಯ ರಾಜ್ಯಭಾಷೆಯನ್ನಾಗಿ ಮಾನ್ಯತೆ ಕೊಡಲು ಯಾವುದೇ ಅನುದಾನ ಬೇಕಿಲ್ಲ. ನಮ್ಮವರ ಇಚ್ಛಾಶಕ್ತಿ ತೋರದೆ ಇರುವುದೇ ಸಮಸ್ಯೆ ಆಗಿದೆ. ತುಳು ಭಾಷೆಯ ಬಗ್ಗೆ ಮುತುವರ್ಜಿ ವಹಿಸಿದ್ದು, ಇನ್ನು ನಾಲ್ಕು ಇಲಾಖೆಗಳ ಎನ್ಓಸಿ ಬರಬೇಕಿದೆ. ನಾಲ್ಕೈದು ತಿಂಗಳಲ್ಲಿ ತುಳುವನ್ನು ರಾಜ್ಯದ ದ್ವಿತೀಯ ಭಾಷೆಯನ್ನಾಗಿ ಮಾಡಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯವರಿಗೆ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆಯಿಂದ 15 ಕಿಮೀ ಆಸುಪಾಸಿನ ನಗರಗಳಿಗೆ ಆ ರಸ್ತೆ ವಿಸ್ತರಣೆ ಮಾಡಲು ಅವಕಾಶ ಇದೆ. ಮಾಣಿಯಿಂದ 18 ಕಿಮೀ ದೂರ ಇರುವ ಪುತ್ತೂರಿಗೆ ಚತುಷ್ಪಥ ರಸ್ತೆ ಮಾಡಬೇಕಿದೆ. ಅದಕ್ಕಾಗಿ ಕೇಂದ್ರ ಹೆದ್ದಾರಿ ಇಲಾಖೆಯ ಜೊತೆಗೆ ಪ್ರಸ್ತಾಪ ಕೊಟ್ಟಿದ್ದು, ಅದನ್ನು ಮಾಡಿಸುತ್ತೇನೆ ಎಂದರು.
ಕಲ್ಲಡ್ಕ- ಉಪ್ಪಿನಂಗಡಿ ಹೆದ್ದಾರಿ ದುರವಸ್ಥೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈ, ಅದನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಮಾಡೋದು. ರಾಜ್ಯ ಸರಕಾರಕ್ಕೆ ಯಾವುದೇ ಹಸ್ತಕ್ಷೇಪ ಮಾಡಲಾಗದು. ಆದರೂ ಹೆದ್ದಾರಿ ಕೆಲಸ ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಒತ್ತಡ ಹೇರಲಾಗಿದೆ. ಇದನ್ನೆಲ್ಲ ಆಯಾ ಭಾಗದ ಸಂಸದರು ಮಾಡಬೇಕು. ಕೇರಳದಲ್ಲಿ ಒಳ್ಳೆಯ ರಸ್ತೆ ಆಗ್ತಾ ಇದೆ, ಅದಕ್ಕಾಗಿ ಅಭಿನಂದಿಸಬೇಕು. ಇಲ್ಲಿನ ಸಂಸದರು ಮುತುವರ್ಜಿ ವಹಿಸಿದ್ದರೆ ಹೆದ್ದಾರಿಗೆ ಈ ದುರವಸ್ಥೆ ಬರುತ್ತಿರಲಿಲ್ಲ ಎಂದರು.