ನುಡಿದಂತೆ ನಡೆಯುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ, ಸುಳ್ಳು ಹೇಳುವುದು ಬಿಜೆಪಿ ಜಾಯಮಾನ – ಹರೀಶ್ ಕುಮಾರ್
ಮಂಗಳೂರು: ಕಾರ್ಕಳದ ಪರಶುರಾಮ ಪ್ರತಿಮೆ ನಕಲಿ ಎಂದು ಸ್ಥಳೀಯರು ಆರೋಪ ಮಾಡಿದ್ದರು. ಸ್ಥಳಕ್ಕೆ ತೆರಳಿ ನಾವು ಪರಿಶೀಲನೆ ಮಾಡಿದ್ದೇವೆ, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚೆ ಮಾಡಿದ್ದೇವೆ. ಅದರ ಬಗ್ಗೆ ತನಿಖೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ, ಖಂಡಿತವಾಗಿಯೂ ತನಿಖೆಯಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ. ಮಂಗಳೂರಿನಲ್ಲಿ ಶಾಸಕ ಅಶೋಕ್ ರೈ ಮತ್ತು ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುತ್ತಿದ್ದು ಜನತೆ ನೆಮ್ಮದಿಯಿಂದ ಇದ್ದಾರೆ. ಇದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಕರಾವಳಿ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲಾಗಿದೆ. ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವುದಾಗಿ ಹಿಂದಿನ ಸರಕಾರ ಹೇಳಿತ್ತು, ನಮ್ಮ ಸರಕಾರ ಬಜೆಟ್ ನಲ್ಲಿ ಇದನ್ನು ಘೋಷಣೆ ಮಾಡಿದೆ. 18ರಿಂದ 20ರಷ್ಟು ಬೇರೆ ಬೇರೆ ವರ್ಗದ ಜನರಿರುವ ಕಾರಣ ಅತೀ ಹಿಂದುಳಿದ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲು ತಾಂತ್ರಿಕ ಸಮಸ್ಯೆ ಇರುವುದರಿಂದ ಹಿನ್ನಡೆಯಾಗಿದೆ ಎಂದವರು ಹೇಳಿದರು. ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ 1 ಲಕ್ಷ ಸಾಲವನ್ನು 3 ಲಕ್ಷಕ್ಕೆ ಏರಿಸಲಾಗಿದೆ. ಡೀಸೆಲ್ ಸಬ್ಸಿಡಿಯನ್ನು ಹೆಚ್ಚಿಸಲಾಗಿದೆ, ಬಂಟ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವುದಾಗಿ ಸಿ ಎಂ ಘೋಷಣೆ ಮಾಡಿದ್ದಾರೆ. 60 ಶೇಕಡ ಬಂಟರು ಹಳ್ಳಿಯಲ್ಲಿದ್ದಾರೆ. ಸಮುದಾಯದ ಸಂಸ್ಕೃತಿಯ ಸಂಶೋಧನೆ, ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಆರೋಗ್ಯ ವೆಚ್ಚ ಭರಿಸಲು, ಸೂರು ನೀಡುವ ಉದ್ದೇಶದಿಂದ ನಿಗಮ ಸ್ಥಾಪನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ನುಡಿದಂತೆ ನಡೆಯುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ, ಸುಳ್ಳು ಹೇಳುವುದು ಬಿಜೆಪಿ ಜಾಯಮಾನವಾಗಿದೆ. ಚುನಾವಣಾ ಸಂದರ್ಭದಲ್ಲಿ ಏನೆಲ್ಲಾ ಭರವಸೆಗಳನ್ನು ಕಾಂಗ್ರೆಸ್ ನೀಡಿತ್ತೋ ಅದೆಲ್ಲವನ್ನೂ ಈಡೇರಿಸಲಿದೆ. ಕಾಂಗ್ರೆಸ್ ಎಂದೆಂದೂ ಬಡವರ ಪರ ಇರುವ ಪಕ್ಷವಾಗಿದೆ. ಬಿಲ್ಲವರಿಗಾಗಿ ನಾರಾಯಣ ಗುರು ಹೆಸರಿನಲ್ಲಿ ನಿಗಮ ಮಾಡುವುದಾಗಿ ಹೇಳಿದ್ದ ಬಿಜೆಪಿ ನಿಗಮ ಮಾಡಿತ್ತೇ ವಿನಃ ಅದನ್ನು ಘೋಷಣೆ ಮಾಡಿರಲಿಲ್ಲ. ಘೋಷಣೆ ಮಾಡಿ ಅದಕ್ಕೆ ಬಜೆಟ್‌ನಲ್ಲಿ ಅನುದಾನ ಇಟ್ಟದ್ದು ಸಿದ್ದರಾಮಯ್ಯ ಸರಕಾರವಾಗಿದೆ ಎಂದು ಹೇಳಿದರು. ಬಂಟ ಮತ್ತು ಬಿಲ್ಲವರಿಗೆ ನಿಗಮವನ್ನು ಪ್ರಾರಂಭ ಮಾಡುವ ಮೂಲಕ ಆ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಲುಕ್ಮಾನ್, ಮುರಳೀಧರ್ ರೈ ಮಠಂತಬೆಟ್ಟು, ಶಾಹುಲ್ ಹಮೀದ್ ಬೆಳ್ತಂಗಡಿ ಉಪಸ್ಥಿತರಿದ್ದರು.